ಬೆಂಗಳೂರು, ಜು. 05:ಹೊಸಪೇಟೆ ನಗರಸಭೆ, ಹೊಸಪೇಟೆ ತಾಲೂಕು ಮತ್ತು ಹೂವಿನಹಡಗಲಿ ತಾಲೂಕಿನ ದಾಸರಹಳ್ಳಿ ಗ್ರಾಮದ ಸರ್ಕಾರಿ ಭೂಮಿಗಳ ಅಕ್ರಮ ಪರಭಾರೆಯು ಸರ್ಕಾರದ ಗಮನಕ್ಕೆ ಬಂದಿದ್ದು, ತಪ್ಪಿತಸ್ತರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು,
ಹೊಸಪೇಟೆ ಗ್ರಾಮದ 3.49 ಎಕರೆ ಮತ್ತು ಹೊಸಪೇಟೆ ನಗರಸಭೆ ವ್ಯಾಪ್ತಿಯ ಸಂಕಲಾಪುರ ಗ್ರಾಮದ 2.17 ಎಕರೆ ಭೂಮಿಯ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಮೂನೆ -3 ರನ್ನು ಹಂಚಿಕೆ ಮತ್ತು ಹೂವಿನಹಡಗಲಿಯ ದಾಸರಹಳ್ಳಿ ಗ್ರಾಮದ 8.26 ಎಕರೆ ಭೂಮಿಯ ಅಕ್ರಮ ವಿಲೇವಾರಿ ಮಾಡಿರುವ ಪ್ರಕರಣ ಬಯಲಾಗಿದೆ.
ಹೊಸಪೇಟೆ ನಗರಸಭೆಯ ಹಿಂದಿನ ವಿಷಯ ನಿರ್ವಾಹಕ, ದ್ವಿತೀಯ ದರ್ಜೆ ಸಹಾಯಕರಾಗಿದ್ದ ಎಸ್. ಸುರೇಶ್, ಹಿಂದಿನ ಪ್ರಭಾವ ಕರವಸೂಲಿಗಾರ, ಕಂದಾಯ ನಿರೀಕ್ಷಕರಾಗಿದ್ದ ಜಿ. ನೀಲಕಂಠಸ್ವಾಮಿ (ಹಾಲಿ ಹಿರಿಯ ವಾಲ್ಮ್ಯಾನ್, ಹೂವಿನಹಡಗಲಿ ಪುರಸಭೆ) ಅವರನ್ನು ಅಮಾನತು ಮಾಡಿ, ಇಲಾಖಾ ತನಿಖೆಗೆ ಒಳಪಡಿಸಲಾಗಿದೆ. ಪ್ರಭಾರಿ ಕರವಸೂಲಿಗಾರರಾಗಿದ್ದ ಕೆ. ರಮೇಶ್ ಅವರನ್ನು ಬೇರೆಡೆಗೆ ವರ್ಗ ಮಾಡಲಾಗಿದೆ ಎಂದು ಅವರು ಸದನಕ್ಕೆ ಉತ್ತರ ನೀಡಿದರು.
ಹೂವಿನಹಡಗಲಿಯ ದಾಸರಹಳ್ಳಿ ಗ್ರಾಮದ ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ದಾಖಲೆಗಳನ್ನು ತಿದ್ದುಪಡಿ ಮಾಡಿ, ಭೂಮಿ ತಂತ್ರಾAಶದಲ್ಲಿ ಅನಧಿಕೃತ ವ್ಯಕ್ತಿಗಳ ಹೆಸರುಗಳನ್ನು ನಮೂದು ಮಾಡಿ ಪರಭಾರೆ ಮಾಡಿದ ಆರೋಪ ಎದುರಿಸುತ್ತಿರುವ ಹೂವಿನಹಡಗಲಿಯ ಗ್ರೇಡ್-2 ತಹಸೀಲ್ದಾರ್ ನಟರಾಜ, ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ (ಹೂವಿನಹಡಗಲಿ ತಾಲೂಕು ಕಚೇರಿಯಲ್ಲಿದ್ದ ಶಿರಸ್ತೇದಾರ) ಮಹಮ್ಮದ್ ಗೌಸ್, ಹರಪನಹಳ್ಳಿ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ (ಹೂವಿನಹಡಗಲಿ ತಾಲೂಕಿನ ಪ್ರಥಮ ದರ್ಜೆ ಸಹಾಯಕರಾಗಿದ್ದ) ಪುನೀತ್ ವಿರುದ್ಧ ಇಲಾಖಾ ವಿಚಾರಣೆ ನಡೆದಿದೆ. ಹಿರೇಹಡಗಲಿ ಹಾಗೂ ದಾಸರಹಳ್ಳಿ ಗ್ರಾಮದ ಆಡಳಿತಾಧಿಕಾರಿಯಾಗಿದ್ದ ಸಿ.ಎಂ. ಕೊಟ್ರೇಶ್ ಅವರನ್ನು ಅಮಾನತು ಮಾಡಿ, ಇಲಾಖಾ ವಿಚಾರಣೆಗೆ ಒಳಪಡಿಸಲಾಗಿದೆ.
ಸರ್ಕಾರಿ ದಾಖಲೆಗಳ ತಿದ್ದುಪಡಿ ಮತ್ತು ಅಕ್ರಮ ಪರಭಾರೆ ಕುರಿತು ಹೊಸಪೇಟೆ ಮತ್ತು ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದ್ದು, ಸರ್ಕಾರ ಪ್ರಕರಣವನ್ನು ತೀವ್ರವಾಗಿ ಪರಿಗಣಿಸಿದ್ದು ತಪ್ಪಿತಸ್ತರನ್ನು ಶಿಕ್ಷೆಗೊಳಪಡಿಸಲಾಗುತ್ತದೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ಸ್ಪಷ್ಟಪಡಿಸಿದ್ದಾರೆ.