ಸುದ್ದಿಮೂಲ ವಾರ್ತೆ
ತುಮಕೂರು ಜು.5 : ಸ್ವಾಭಾವಿಕ ಮಳೆಯಾಗಬೇಕಾದರೆ ಹೆಚ್ಚು ಗಿಡ ಮರಗಳನ್ನು ಬೆಳೆಸುವುದರ ಜೊತೆಗೆ
ಪರಿಸರವನ್ನು ಉಳಿಸಬೇಕು. ಈ ಮೂಲಕ ಅಂತರ್ಜಲವನ್ನು ಕಾಪಾಡಿಕೊಳ್ಳಬೇಕು. ಅಂತರ್ಜಲ ಸಂರಕ್ಷಣೆಯೂ ಆಗಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಜಿ.ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರೀಯ ಅಂತರ್ಜಲ ಮಂಡಳಿ, ನೈಋತ್ಯ ಪ್ರದೇಶ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಲಧಾರೆಗಳ ನಕಾಶಿಕೆ ಮತ್ತು ಅಂತರ್ಜಲ ಸಂರಕ್ಷಣೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆ ಅಗತ್ಯವಿದೆ. ಇಂದು ಅಭಿವೃದ್ಧಿ ಹೆಸರಿನಲ್ಲಿ ಗಿಡ ಮರಗಳನ್ನು ನಾಶ ಮಾಡಲಾಗುತ್ತಿದ್ದು, ಇದು ಪರಿಸರಕ್ಕೆ ಬಹುದೊಡ್ಡ ಮಾರಕವಾಗಿ ಪರಿಣಮಿಸಲಿದೆ . ಇದು ಆತಂಕಕಾರಿ ಬೆಳವಣಿಗೆ ಎಂದರು.
ಭಾರತ ತನ್ನ ಸಾಂಪ್ರದಾಯಿಕ ಜೀವನ ಪದ್ದತಿ, ನೀರಿನ ಮಿತಬಳಕೆ ಮತ್ತು ಸಂರಕ್ಷಣಾ ಮೌಲ್ಯಗಳ ಮೂಲಕ ಸ್ವಸ್ಥ ಮತ್ತು ಸುಸ್ಥಿರ ಜೀವನಶೈಲಿಯನ್ನು ಪ್ರಚುರಗೊಳಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆಯು ಪ್ರತಿ ವರ್ಷ ಲಕ್ಷಾಂತರ ಸಸಿಗಳನ್ನು ನೆಡುತ್ತಿದ್ದಾರೆ. ಮೂರು ವರ್ಷ ಸಸಿಗಳನ್ನು ನೆಟ್ಟ ನಂತರ ಸಂರಕ್ಷಣೆ ಮಾಡಿದರೆ ನೆಟ್ಟ ಶೇ. 90
ರಷ್ಟು ಸಸಿಗಳು ಉಳಿಯಲಿವೆ . ಮಳೆ ನೀರನ್ನು ಸಂರಕ್ಷಣೆ ಮಾಡುವುದಕ್ಕಾಗಿ ಮಳೆನೀರು ಸಂಗ್ರಹಣಾ ವಿಧಾನಗಳನ್ನು ಬಳಸಿಕೊಂಡು ನೀರನ್ನು ಶೇಖರಿಸಿಕೊಂಡು ಆ ನೀರನ್ನು ಅಗತ್ಯ ಚಟುವಟಿಕೆಗಳಿಗೆ
ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರೀಯ ಅಂತರ್ಜಲ ಮಂಡಳಿಯ ಹಿರಿಯ ವಿಜ್ಞಾನಿಗಳಾದ ಹೆಚ್.ಪಿ.
ಜಯಪ್ರಕಾಶ್ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕೃಷಿ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು
ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಎನ್ಜಿಒ, ಸ್ವ ಸಹಾಯ ಸಂಘಗಳ ಪ್ರತಿನಿಧಿಗಳು ಹಾಗೂ ಪ್ರಗತಿಪರ ರೈತರು ಹಾಜರಿದ್ದರು.