ಸುದ್ದಿಮೂಲ ವಾರ್ತೆ
ಬೆಂಗಳೂರು,ಜು.5: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಂಪುಟದ ಕೆಲ ಸಚಿವರು ಸರ್ಕಾರಿ ನೌಕರರ ವರ್ಗಾವಣೆ ಮಾಡಲು ಐವತ್ತು ಲಕ್ಷ ರೂಗಳಿಂದ ಒಂದು ಕೋಟಿ ರೂಗಳವರೆಗೆ ಲಂಚ ಪಡೆಯುತ್ತಿದ್ದಾರೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇಂದಿಲ್ಲಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಅವರು, ಇಂಧನ ಸೇರಿದಂತೆ ಹಲವು ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರಗಳ ತುಣುಕುಗಳನ್ನು ಒಳಗೊಂಡ ಪೆನ್ ಡ್ರೈವ್ ಅನ್ನು ಮಾಧ್ಯಮದವರ ಮುಂದೆ ಪ್ರದರ್ಶಿಸಿ,ಈ ಬಗ್ಗೆ ಸದನದಲ್ಲಿ ಸಭಾ ನಾಯಕರು ಉತ್ತರಿಸಲಿ ಎಂದು ನುಡಿದರು.
ಕುಮಾರಸ್ವಾಮಿ ಖಾಲಿ ಬುಟ್ಟಿ ಇಟ್ಟುಕೊಂಡು ಇದರಲ್ಲಿ ಹಾವು ಇದೆ ಎಂದು ತೋರಿಸುತ್ತಿದ್ದಾರೆ ಎಂದು ಕೆಲ ಸಚಿವರು ವ್ಯಂಗ್ಯವಾಡಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕುಮಾರಸ್ವಾಮಿ,ಇದು ಖಾಲಿ ಬುಟ್ಟಿಯಲ್ಲಿ,ಇದರಲ್ಲಿ ಹಾವಿದೆ ನೋಡಿ ಎಂದರು.
ಭ್ರಷ್ಟ ಅಧಿಕಾರಿಯೊಬ್ಬರು ಹತ್ತು ಕೋಟಿ ರೂಪಾಯಿ ಲಂಚ ನೀಡಿ ಇಂಧನ ಇಲಾಖೆಗೆ ಪೋಸ್ಟಿಂಗ್ ಪಡೆದಿದ್ದಾರೆ.ಅವರಿಗೆ ಒಂದು ದಿನಕ್ಕೆ ಐವತ್ತು ಲಕ್ಷ ರೂಪಾಯಿ ಲಂಚ ಬರುತ್ತದೆ ಎಂದರು.
ನಾನೇನೂ ಟೆಂಟ್ ಗಳಲ್ಲಿ ನೀಲಿ ಚಿತ್ರಗಳನ್ನು ತೋರಿಸಿ ಕಾಸು ಮಾಡಿದವನಲ್ಲ,ರೌಡಿಗಳಿಗೆ ಮಧ್ಯ ಪೂರೈಸಿ ದುಡ್ಡು ಮಾಡಿದವನಲ್ಲ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕಿಡಿ ಕಾರಿದರು.
ನಾನು ವೆಸ್ಟ್ ಎಂಡ್ ಹೋಟೆಲಿನಲ್ಲಿ ಬಾಡಿಗೆ ಕೊಡದೆ ಉಳಿದುಕೊಂಡಿರುವುದು ಇವರಿಗೆ ಗೊತ್ತೇ?ಎಂದು ಪ್ರಶ್ನಿಸಿದ ಅವರು,ನನ್ನ ಸ್ನೇಹಿತರು ನನಗೆ ಹಣ ಕೊಡುತ್ತಾರೆ.ನಾನು ಈಗಲೂ ವೆಸ್ಟ್ ಎಂಡ್ ಹೋಟೆಲಿನ ಕೋಣೆಯಲ್ಲಿದ್ದೇನೆ.ಅವರೇನಾದರೂ ಈ ಮಹಾನುಭಾವರಿಗೆ ದೂರು ನೀಡಿದ್ದಾರಾ?ಎಂದು ಪ್ರಶ್ನಿಸಿದರು.
ಈ ಸಂಬಂಧ ಕಾಂಗ್ರೆಸ್ ಪಕ್ಷ ಸರಣಿ ಟ್ವೀಟ್ ಮಾಡಿ,ಏನೋ ದೊಡ್ಡ ಸಾಧನೆ ಮಾಡಿದಂತೆ ಬೀಗುತ್ತಿದೆ.ಆದರೆ ನಾನು ರಾಜಕೀಯಕ್ಕೆ ಬರುವ ಮುನ್ನ ಮತ್ತು ಬಂದ ನಂತರ ನನ್ನ ಹಣಕಾಸು ವಹಿವಾಟಿನ ಬಗ್ಗೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿ ಅವರ ಪೆನ್ ಡ್ರೈವ್ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ,ಪಾಪ,ಕುಮಾರಸ್ವಾಮಿ ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ.ಚುನಾವಣಾ ಸೋಲಿನಿಂದ ಹೊರಬರಲಾಗದೆ ಇಂತಹ ಆರೋಪ ಮಾಡುತ್ತಿದ್ದಾರೆ.ಎಲ್ಲದಕ್ಕೂ ವಿಧಾನಸಭೆಯಲ್ಲೇ ಉತ್ತರ ಕೊಡುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರತ್ಯೇಕವಾಗಿ ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್,ನನ್ನ ಇಲಾಖೆಯಲ್ಲಿ ದುಡ್ಡು ಪಡೆದು ಲಂಚ ಪಡೆದಿದ್ದೇ ಆಗಿದ್ದರೆ ಈ ಕುರಿತ ದಾಖಲೆಯನ್ನು ಸಭಾಧ್ಯಕ್ಷರಿಗೆ ನೀಡಲಿ,ಆನಂತರ ನಾನು ಉತ್ತರಿಸುತ್ತೇನೆ ಎಂದು ಹೇಳಿದರು