ಸುದ್ದಿಮೂಲ ವಾರ್ತೆ
ಮೈಸೂರು, ಜು.5 : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ, ನನಗೂ ಸ್ಥಾನಮಾನ ಬೇಕು. ಹೈಕಮಾಂಡ್ ಒಪ್ಪಿದರೆ ಬರುವ ಲೋಕಸಭೆಯಲ್ಲಿ ಸ್ಪರ್ಧಿಸುವ ಒಲವು ತೋರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಂದೆಯವರು ಸಿಎಂ ಆಗಿರುವ ಕಾರಣ ಕ್ಷೇತ್ರದ ಜನರಿಗೆ ಹೆಚ್ಚು ಸಮಯ ಕೊಡಲಾಗುತ್ತಿಲ್ಲ. ಅವರನ್ನು ನೋಡಲು ಬರುವ ರಾಜ್ಯದ ಜನರನ್ನು ಭೇಟಿಯಾಗಬೇಕು. ಆದ್ದರಿಂದ ವರುಣ ಕ್ಷೇತ್ರದ ಮತದಾರರಿಗೆ ಹೆಚ್ಚು ಸಮಯ ಕೊಡಲಾಗುತ್ತಿಲ್ಲ. ಜನರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ಅಧಿಕಾರಿಗಳಿಗೆ ಹೇಳಿ ಜನರ ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸಲು ಸರ್ಕಾರಿ ಸ್ಥಾನಮಾನ ಇರಬೇಕು ಎಂದು ಹೇಳಿದ್ದಾರೆ.
ಲೋಕಸಭೆಗೆ ಸ್ಪರ್ಧಿಸಲು ಹಿತೈಷಿಗಳು, ಬೆಂಬಲಿಗರು ಒತ್ತಾಯಿಸುತ್ತಿದ್ದು, ಹೈಕಮಾಂಡ್ ಒಪ್ಪಿದರೆ ಸ್ಪರ್ಧಿಸುತ್ತೇನೆ. ನನಗೆ ಯಾವುದಾದರು ಚಿಕ್ಕದಾದ ಸ್ಥಾನಮಾನ ನೀಡಿದರೂ ಸಹಕಾರಿ ಆಗುತ್ತೆ. ಕಳೆದ ಬಾರಿ ಆಶ್ರಯ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿದ್ದರು. ಅದು ದೊಡ್ಡ ಹುದ್ದೆಯಲ್ಲ, ಸಣ್ಣ ಹುದ್ದೆ ನೀಡಿದರೂ ಜನರ ಸೇವೆ ಮಾಡಲು ಸಹಾಯಕ ಎಂದರು.
ಇದೇ ವೇಳೆ ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ವಿಧಾನಪರಿಷತ್ತು ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.