ಸುದ್ದಿಮೂಲ ವಾರ್ತೆ
ತಿಪಟೂರು, ಜು 5 : ಕಲ್ಪವೃಕ್ಷ ನಾಡು ತಿಪಟೂರಿನ ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ತೆಂಗು ಬೆಳೆದ ರೈತನ ಗೋಳು ಕೇಳದಾಗಿದೆ. ಸುಮಾರು 13 ಜಿಲ್ಲೆಗಳ ರೈತರ ಜೀವನಾಡಿ, ಆದಾಯ ಬೆಳೆಯಾದ ತೆಂಗು ಕಳೆದ ನಾಲ್ಕೈದು ತಿಂಗಳಿನಿಂದ ಸತತವಾಗಿ ಇಳಿಮುಖವನ್ನು ಕಾಣುತ್ತಿದೆ.
ಪ್ರಸ್ತುತ 100 ಕೆ.ಜಿ ಕೊಬ್ಬರಿಗೆ 6800 ರೂಪಾಯಿಗಳಷ್ಟು ಆಗಿದೆ. ಕ್ವಿಂಟಾಲ್ ಕೊಬ್ಬರಿಗೆ 19000 ರೂಪಾಯಿಯಿದ್ದ ಕೊಬ್ಬರಿ ಸತತವಾಗಿ ಇಳಿಮುಖ ಕಂಡು ಸರ್ಕಾರದ ನೆಫೆಡ್ ಕೇಂದ್ರವನ್ನು
ತೆರದು ಕ್ವಿಂಟಾಲ್ಗೆ 11,750 ರೂ.ನಂತೆ ಖರೀದಿ ಮಾಡುತ್ತಿದ್ದರೂ ಸೂಕ್ತವಾದ
ಬೆಲೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ಬೆಲೆ ನಿಗದಿ ಮಾಡುವುದಾಗಿ ಭರವಸೆ ಸಿಕ್ಕಿತ್ತು. ಅದರಂತೆ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಆದರೆ, ಕೊಬ್ಬರಿ ಬೆಲೆ ಮಾತ್ರ ಹೆಚ್ಚಾಗಿಲ್ಲ. ದಿನೇ ದಿನೇ ಕುಂಠಿತವಾಗುತ್ತಿದೆ.
ಸರಕಾರ ನೆಫಡ್ ಮೂಲಕ ಕೊಬ್ಬರಿ ಖರೀದಿಗೆ ಮುಂದಾಗಿದೆ. ಅದರಲ್ಲಿರುವ ಮಾರ್ಗಸೂಚಿಗಳು ರೈತರನ್ನು ಅವಮಾನಿಸುವ ರೀತಿಯಲ್ಲಿದೆ.. ರೈತನು ಮಾರುಕಟ್ಟೆಗೆ ತಂದ ಪ್ರತಿ ಕೊಬ್ಬರಿಯನ್ನು ಅಳತೆ ಮಾಪನದಿಂದ ಚುಚ್ಚಿ ಹಸಿ-ಒಣ ಕೊಬ್ಬರಿ ಪರಿಶೀಲನೆ ಮಾಡುವುದು, ಸಣ್ಣ- ದಪ್ಪ ಎಂದು ವಿಂಗಡಿಸಿ ಸಣ್ಣ ಉಂಡೆ ಕೊಬ್ಬರಿಯನ್ನು ತಿರಸ್ಕೃತ ಮಾಡುವುದು, ಕೊಬ್ಬರಿ ಬೆಳೆಯ ಬಗ್ಗೆ ಗೊತ್ತಿಲ್ಲದ ವ್ಯಕ್ತಿಗಳನ್ನು ಖರೀದಿ ಕೇಂದ್ರದಲ್ಲಿ ಅಧಿಕಾರಿಯಾಗಿ ನೇಮಿಸಿರುವುದು ಕೊಬ್ಬರಿ ಬೆಳೆಗಾರರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ ಎಂಬುದು ರೈತರ ಅಳಲು.
ಅತಿ ಹೆಚ್ಚು ತೆಂಗು ಬೆಳೆಯುವುದು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ. ತೆಂಗು ಅಭಿವೃದ್ದಿ ಮಂಡಳಿ ಕಚೇರಿಯು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿದೆ. ಇದರ ಸಂಪೂರ್ಣ ಲಾಭವನ್ನು ಹೊರ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನ ರೈತರು ಪಡೆಯುತ್ತಿದ್ದಾರೆ. ಮಂಡಳಿಯ ಸದಸ್ಯರಾಗಿರುವ ತುಮಕೂರು ಲೋಕಸಭಾ ಸದಸ್ಯ ಜಿ.ಎಸ್ ಬಸವರಾಜು, ತಿಪಟೂರಿನ ಅಣ್ಣಾಪುರದ ಅಶ್ವತ್ ನಾರಯಣ್, ಹೊಸದುರ್ಗದ ಗುರುಸ್ವಾಮಿ ಅವರುಗಳು ಪ್ರಶ್ನಿಸದೇ ಮೌನವಾಗಿದ್ದು, ತೆಂಗು ಬೆಳೆದ ಕೊಬ್ಬರಿ ರೈತನ ಬದುಕು ಹೀನಾಯವಾಗಿದೆ ಎನ್ನುತ್ತಾರೆ ತೆಂಗು ಬೆಳೆಗಾರರು.
ಕೋಟ್ :
ಉತ್ತರ ಭಾರತದಲ್ಲಿ ಇನ್ನೂ 45 ದಿನಗಳ ಕಾಲ ಯಾವ ಹಬ್ಬಗಳು ಇಲ್ಲದಿರುವುದರಿಂದ ಬೆಲೆ ಹೆಚ್ಚಳ ಅಸಾಧ್ಯ. ಶ್ರಾವಣ ಮಾಸದಲ್ಲಿ ಸ್ವಲ್ಪ ಚೇತರಿಕೆ ಕಾಣಬಹುದು ಎಂಬ ಆಶಾಭಾವನೆಯಿದೆ.
ವರ್ತಕರು
ಕೋಟ್ :
ಈಗಾಗಲೇ ತೆಂಗು ಬೆಳೆಗೆ ಹಲವಾರು ರೀತಿಯ ರೋಗಗಳು ಕಂಡುಬರುತ್ತಿದ್ದು ಫಲವು ಕ್ಷೀಣಿಸುತ್ತಿರುವ ಸಂಧರ್ಭದಲ್ಲಿ ಕೊಬ್ಬರಿ ಬೆಲೆ ಪಾತಾಳ ಕಂಡಿದೆ. ಇದನ್ನು ಅವಲಂಬಿಸಿರುವ ರೈತ ಕುಟುಂಬಗಳು
ಸಾಲದ ಸುಳಿಗೆ ಸಿಲುಕಿದೆ. ತೆಂಗು ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು.