ಸುದ್ದಿಮೂಲ ವಾರ್ತೆ
ಹೊಸಕೋಟೆ, ಜು 6 : ತಾಲೂಕಿನ ನೆಲವಾಗಿಲು ಗ್ರಾ.ಪಂ ವ್ಯಾಪ್ತಿಯ ಎತ್ತಿನೊಡೆಯನಪುರದ ಸರಕಾರಿ ಪ್ರಾಥಮಿಕ ಶಾಲೆ ಕಳೆದ ಮೂವತ್ತು ವರ್ಷಗಳ ಹಿಂದಷ್ಟೇ ಕಟ್ಟಿರುವ 2 ಶಾಲಾ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಮಕ್ಕಳು ಭಯದಲ್ಲಿ ಪಾಠಪ್ರವಚನ ಕೇಳುವ ಸ್ಥಿತಿ ಎದುರಾಗಿದೆ.
ಎತ್ತಿನೊಡೆಯನಪುರ ಗ್ರಾಮ 60 ಕುಟುಂಬಗಳಿರುವ ಪುಟ್ಟ ಗ್ರಾಮವಾಗಿದ್ದು, ಎಲ್ಲರೂ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಶಾಲೆಗೆ ಬರುವರೆಲ್ಲರೂ ದಲಿತ ಮಕ್ಕಳಾಗಿದ್ದಾರೆ. ಕಳೆದ 5 ವರ್ಷಗಳಿಂದ ಕಟ್ಟಡ ಮಳೆಗೆ ಸಿಲುಕಿ ಚಾವಣೆಯಿಂದ ನೀರು ಸೋರಲು ತೊಡಗಿದ್ದು, ಗೋಡೆಗಳು ಬಿರುಕು ಬಿಟ್ಟಿದ್ದು, ಕಲ್ಲು ಕಟ್ಟಡ ಅಂಚಿನಲ್ಲಿದೆ.
ಆವರಣದಲ್ಲಿ ತರಗತಿಗಳು : ಶಾಲಾ ಆರಂಭದ ದಿನಗಳಲ್ಲಿ ಉತ್ತಮ ದಾಖಲಾತಿ ಹೊಂದಿದ್ದ ಶಾಲೆ ಇದೀಗ ಶಿಥಿಲಾವಸ್ಥೆಯ ಕಾರಣಕ್ಕೆ ಮಕ್ಕಳ ದಾಖಲಾತಿ ಪ್ರಮಾಣ ಪ್ರತಿ ಶೈಕ್ಷಣಿಕ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಪ್ರಸ್ತುತ ಈ ಶಾಲೆಯಲ್ಲಿ 1 ರಿಂದ 5ನೇ ತರಗತಿಗೆ ಒಟ್ಟು 8 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಕರು ಕಟ್ಟದ ದುಸ್ಥಿತಿಯಿಂದಾಗಿ ಕಳೆದ 5 ವರ್ಷಗಳಿಂದ ಶಾಲೆಯ ಬಯಲಿನಲ್ಲೇ ಪಾಠ ಹೇಳಿ ಕೊಡುತ್ತಿದ್ದಾರೆ.
ಬಿಸಿಲು, ಮಳೆಯಲ್ಲೇ ಬೋಧನೆ : ಇಲ್ಲಿನ ಶಿಕ್ಷಕರು ಹಾಗೂ ಮಕ್ಕಳು ಬಿಸಿಲು , ಚಳಿ,ಗಾಳಿ, ಮಳೆಯನ್ನು ಲೆಕ್ಕಸದೇ ಶಾಲಾ ಆವರಣದಲ್ಲೇ ಪಾಠ ಪ್ರವಚನ ಕೇಳುವಂತಾಗಿದೆ . ಮಕ್ಕಳು ಶೌಚಾಲಯಕ್ಕೆ ಹೋಗಲು ಬಯಲನ್ನು ಆಶ್ರಯಿಸಬೇಕಾಗಿದೆ . ಆಟೋಟಗಳಿಗೂ ಅವಕಾಶ ಇಲ್ಲದಂತಾಗಿದೆ. ಏನು ಅರಿಯದ ಕಂದಮ್ಮಗಳನ್ನು ಶಿಥಿಲವಾಸ್ಥೆಯಲ್ಲಿರುವ ಕೊಠಡಿಗಳ ಬಳಿ ಸುಳಿಯದಂತೆ ಜೋಪಾನವಾಗಿ ಕಾಪಾಡುವುದೇ ಶಿಕ್ಷಕರಿಗೆ ನಿತ್ಯ ಸವಾಲಿನ ಪ್ರಶ್ನೆಯಾಗಿದೆ .
ಸತತ 5 ವರ್ಷಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸ್ಥಳೀಯ ಗ್ರಾ.ಪಂ ಸೇರಿದಂತೆ ಈ ಭಾಗದ ಜನಪ್ರತಿನಿಧಿಗಳಿಗೆ ಮೂರು ದಶಕಗಳ ಹಳೆಯ ಶಿಥಿಲವಾಗಿರುವ ಕೊಠಡಿಗಳನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ಹುಸಿಯಾದ ಭರವಸೆ: 2 ವರ್ಷಗಳ ಹಿಂದೆ ಶಾಲೆಗೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶಿಕ್ಷಕರಿಂದ ಮಾಹಿತಿ ಪಡೆದು, ಹೊಸ ಕಟ್ಟಡ ಕಟ್ಟಲು ತ್ವರಿತವಾಗಿ ಕ್ರಮ ವಹಿಸುವುದಾಗಿ ಭರವಸೆ ನೀಡಿ ಹೋದವರು ಮತ್ತೆ ಇತ್ತ ಕಡೆ ತಿರುಗಿಯೂ ನೋಡಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಕೋಟ್ 1
ಎತ್ತಿನೊಡೆಯನಪುರ ಶಾಲಾ ಕಟ್ಟಡ ಶಿಥಿಲಾವಸ್ಥೆ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಕೊಠಡಿ ನಿರ್ಮಾಣಕ್ಕೆ ಅನುದಾನ ದೊರೆತ ತಕ್ಷಣ ಮೊದಲ ಪ್ರಾಶಸ್ಯ ನೀಡಲಾಗುವುದು. ಸನಿಹದಲ್ಲೇ ಅರೆಹಳ್ಳಿ ಗ್ರಾಮದಲ್ಲಿ ಉತ್ತಮವಾದ ಶಾಲಾ ಕಟ್ಟಡವಿದ್ದು, ಪೋಷಕರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಅಂಗನವಾಡಿ ಕಟ್ಟಡದಲ್ಲಿ ಶಾಲೆ ನಡೆಸಲು ಶಿಕ್ಷಕರಿಗೆ ಸೂಚಿಸಲಾಗಿದೆ.
– ವಿವೇಕಾನಂದ | ಕ್ಷೇತ್ರ ಶಿಕ್ಷಣಾಧಿಕಾರಿ, ಹೊಸಕೋಟೆ
ಕೋಟ್ 2
ಶಿಥಿಲ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗ್ರಾ.ಪಂಗೆ ಮನವಿ ಸಲ್ಲಿಸಿದ್ದು, ತಾಪಂ ಮೂಲಕ ಜಿಲ್ಲಾಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದು, ಕಳೆದ ವರ್ಷವೇ ಆರ್ಐಡಿಎಫ್ ಯೋಜನೆಯಡಿ ತುರ್ತಾಗಿ ನೂತನ ಕಟ್ಟಡ ನಿರ್ಮಿಸಲು ಅಂದಾಜು ಪಟ್ಟಿ ತಯಾರಿಸಿ, ಕಾಮಗಾರಿ ನಡೆಸಲು ಟೆಂಡರ್ ಪ್ರಕ್ರಿಯೆ ನಡೆಸುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಜಿಪಂ ವತಿಯಿಂದ ಅದೇಶ ನೀಡಿದ್ದರೂ, ಕಾರ್ಯಗತವಾಗದೆ ನನೆಗುದಿಗೆ ಬಿದ್ದಿದೆ.
– ಮುನಿರಾಜು | ಪಿಡಿಓ, ನೆಲವಾಗಿಲು ಗ್ರಾಪಂ
ಕೋಟ್ 3
ಶಾಲಾ ಕೊಠಡಿಗಳು
ಸಂಪೂರ್ಣವಾಗಿ ಬಿರುಕು ಬಿಟ್ಟಿದ್ದು, ಯಾವ ಕ್ಷಣದಲ್ಲಾದರೂ ಬೀಳುವ ಸ್ಥಿತಿಯಲ್ಲಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದು, ಶಿಕ್ಷಕರು ಪೋಷಕರ ಮನವೊಲಿಸಿ ಶಾಲಾ ಆವರಣದಲ್ಲಿ ಪಾಠ ಪ್ರವಚನ ಮಾಡುವ ಭರವಸೆ ಮೇಲೆ ಶಾಲೆಗೆ ಕಳುಹಿಸುತ್ತಿದ್ದಾರೆ. ನೂತನ ಕೊಠಡಿ ನಿರ್ಮಿಸುವಂತೆ 5 ವರ್ಷಗಳಿ೦ದಲೂ ಕ್ಷೇತ್ರ ಶಿಕ್ಷಣಾಧಿಕಾರಿ, ಸ್ಥಳೀಯ ಗ್ರಾಪಂಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.