ಸುದ್ದಿಮೂಲ ವಾರ್ತೆ
ರಾಮನಗರ, ಜು 6 : ಜಿಲ್ಲೆಯ ನೀಟ್ ಪರೀಕ್ಷೆ ಬರೆಯುವ ಆಕಾಂಕ್ಷಿಗಳು ಶಾಂತಿನಿಕೇತನ ಸಮೂಹ ಸಂಸ್ಥೆಯ ಮೆಡಿಕಲ್ ಅಕಾಡೆಮಿಯಲ್ಲಿ ಇನ್ಮುಂದೆ ತರಬೇತಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಜಿ.ಎಲ್.ಪದ್ಮ ತಿಳಿಸಿದರು.
ನಗರದ ಕನಕಪುರ ವೃತ್ತದಲ್ಲಿರುವ ಶಾಂತಿನಿಕೇತನ ಸಂಯೋಜಿತ ವಸತಿಯುತ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಶಾಂತಿನಿಕೇತನ ಮೆಡಿಕಲ್ ಅಕಾಡೆಮಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರ ಮಟ್ಟದಲ್ಲಿ ನಡೆಯುವ ನೀಟ್ ಪರೀಕ್ಷೆ ಎದುರಿಸಲು ಬೇಕಾದ ತರಬೇತಿಯನ್ನು ಪಡೆಯಲು ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಇನ್ನು ಮುಂದೆ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ನಗರಗಳಿಗೆ ಹೋಗುವುದು ತಪ್ಪಲಿದೆ ಎಂದರು.
ಶಾಂತಿನಿಕೇತನ ಸಂಯೋಜಿತ ಪದವಿ ಪೂರ್ವ ಕಾಲೇಜಿನ ಮುಖ್ಯ ಶಿಕ್ಷಣಾಧಿಕಾರಿ ಸಾಂಭಶಿವರಾವ್ ಮಾತನಾಡಿ, ತಮ್ಮ ಸಂಸ್ಥೆ ದೀರ್ಘಾವಧಿ ನೀಟ್ ಪರೀಕ್ಷಾ ತರಬೇತಿ ನೀಡಲು ಸಜ್ಜಾಗಿದೆ. ಈಗಾಗಲೇ ನೀಟ್ ಪರೀಕ್ಷೆಯನ್ನು ಎದುರಿಸಿ ವಿಫಲವಾಗಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ನುರಿತ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ. ನಿರಂತರ ಅಭ್ಯಾಸ, ಕಠಿಣ ಪರಿಶ್ರಮ ರೂಢಿಸಿಕೊಂಡರೆ ಯಶಸ್ಸು ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪಿಯು ಕಾಲೇಜು ಪ್ರಾಂಶುಪಾಲ ದಿಲೀಪ್, ಸಂಯೋಜಕ ನಾರಾಯಣ್.ಟಿ.ವಿ. ಮತ್ತು ಉಪನ್ಯಾಸಕ ವರ್ಗ ಉಪಸ್ಥಿತರಿದ್ದರು.