ಸುದ್ದಿಮೂಲವಾರ್ತೆ
ಕೊಪ್ಪಳ ಜುಲೈ 07: ಕಲ್ ತಾವರಗೇರಾ ಗ್ರಾಮ ಪಂಚಾಯತನ ಕುಕನಪಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸ್ವಚ್ಛ ಭಾರತ್ ಮಿಷನ್ ಹಾಗೂ ಸಿಡಿಡಿ ಸಂಸ್ಥೆಯವರ ಸಂಯುಕ್ತಾಶ್ರಯದಲ್ಲಿ “ಲೈಟ್ ಹೌಸ್ ಇನಿಶಿಯೇಟಿವ್” ಕಾರ್ಯಕ್ರಮ ಜರುಗಿತು.
ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಪ್ರತಿಯೊಬ್ಬರು ಶೌಚಾಲಯ ಬಳಸಬೇಕು. ಬಯಲು ಶೌಚದಿಂದ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುತ್ತದೆ. ಪರಿಸರ ಅನೈರ್ಮಲ್ಯದಿಂದ ವಾಂತಿ ಬೇಧಿ ಪ್ರಕರಣಗಳು ಉಂಟಾಗುತ್ತವೆ. ಮನೆಯ ಕಸವನ್ನು ಅಲ್ಲಿಯೇ ಹಸಿ ಹಾಗೂ ಒಣ ಕಸ ಎಂದು ಬೇರ್ಪಡಿಸಿ ಕಾಂಪೋಸ್ಟ್ ಮಾಡಬೇಕು. ಒಣ ಕಸವನ್ನು ಗ್ರಾಮ ಪಂಚಾಯತನಿಂದ ಬರುವ ಸ್ವಚ್ಛತಾ ವಾಹಿನಿಗೆ ನೀಡಬೇಕು ಎಂದು ತಿಳಿಸಿದರು. ಜೊತೆಗೆ ಸಮುದಾಯ ಶೌಚಾಲಯ ನಿರ್ವಹಣೆ ಕೂಡ ಸಾರ್ವಜನಿಕರ ಹೊಣೆಯಾಗಿದೆ. ಪ್ರತಿಯೊಂದು ಕುಟುಂಬದವರು ಇಂಗು ಗುಂಡಿ ನಿರ್ಮಾಣ ಮಾಡಿ ಗ್ರಾಮದ ಸ್ವಚ್ಛತೆಗೆ ಸಹಕರಿಸಬೇಕು ಎಂದರು.
ಶಾಲಾ ಮಕ್ಕಳು ಮನೆಯಲ್ಲಿ
ಪಾಲಕರಿಗೆ ಸ್ವಚ್ಛತೆ ಕುರಿತು ಮಾಹಿತಿ ನೀಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಶಿಶು ಅಭಿವೃದ್ಧಿ ಅಧಿಕಾರಿಗಳು, ಸಿಡಿಡಿ ಸಂಸ್ಥೆಯ ಪದಾಧಿಕಾರಿಗಳು, ಶಾಲಾ ಮುಖ್ಯಾಧ್ಯಾಪಕರು, ಗ್ರಾಮ ಪಂಚಾಯತ ಸದಸ್ಯರು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಶಿಕ್ಷಕರು, ಎಸ್ಬಿಎಂಜಿ ಸಮಾಲೋಚಕರು, ಶಾಲಾ ಮಕ್ಕಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಡಿಪಿಎಂ, ಟಿಪಿಎಂ ಸ್ವ- ಸಹಾಯ ಸಂಘದ ಸದಸ್ಯರು, ಗ್ರಾಮ ಪಂಚಾಯತ ಸಿಬ್ಬಂದಿ ಹಾಜರಿದ್ದರು.