ಸುದ್ದಿಮೂಲ ವಾರ್ತೆ
ಮೈಸೂರು, ಜು. 7 : ಆಷಾಢ ಮಾಸದ ಮೂರನೇ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಬೆಳಗ್ಗೆ 5:30 ರಿಂದ ರಾತ್ರಿ 12 ವರೆಗೆ ತಾಯಿ ಚಾಮುಂಡಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮುಂಜಾನೆ 3 ರಿಂದಲೇ ನಾಡ ಅದಿದೇವತೆ ಚಾಮುಂಡಿ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದರು.
ಆಷಾಢಮಾಸದ ಪ್ರಯುಕ್ತ ವಿಶೇಷ ಪೂಜೆ ಆರಂಭವಾಗಿದ್ದು,ಮಹಾನ್ಯಾಸಕ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕವನ್ನು ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ನೇತೃತ್ವದ ಅರ್ಚಕರ ತಂಡ ಮಾಡಿತು.
ಆಷಾಢ ಮಾಸದ ಶುಕ್ರವಾರದಂದು ನಾಡದೇವತೆ ಭಕ್ತರನ್ನು ಆಶೀರ್ವಾದಿಸಲು ಬರುತ್ತಾಳೆ ಎಂಬ ನಂಬಿಕೆ ಜನರಲ್ಲಿದೆ. ಈ ದಿನ ದೇವಿಯ ದರ್ಶನ ಪಡೆದರೆ ಸಹಸ್ರ ಪುಣ್ಯದ ಫಲ ದೊರೆಯಲಿದೆ ಎಂಬ ಪ್ರತೀತಿ ಕೂಡ ಇದೆ. ಇದೇ ಕಾರಣದಿಂದ ಸಾವಿರಾರು ಜನರು ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಾರೆ. ಭಕ್ತರು ವಿವಿಧ ಸೇವೆಗಳನ್ನು ಹಾಗೂ ಪೂಜೆಗಳನ್ನು ನೆರವೇರಿಸಿದರು. ದೇವಸ್ಥಾನದಲ್ಲಿ ಬಗೆಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿದೆ.