ಸುದ್ದಿಮೂಲವಾರ್ತೆ
ಕೊಪ್ಪಳ ಜು 08: ಸಿಎಂ ಸಿದ್ದರಾಮಯ್ಯ ಅವರ ಮಾನಸಪುತ್ರ ಎಂದೇ ಹೆಸರಾದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಕ್ಷೇತ್ರಕ್ಕೆ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಚುನಾವಣೆ ವೇಳೆ ಕ್ಷೇತ್ರದ ಜನತೆಗೆ ನೀಡಿದ ಭರವಸೆ ಹುಸಿಗೊಳಿಸಿದ್ದಾರೆ ಎಂದು ಬಿಜೆಪಿ ಮುಖಂಡರಾದ ಮಂಜುಳಾ ಅಮರೇಶ ಕರಡಿ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಚುನಾವಣೆ ಸಂದರ್ಭದಲ್ಲಿ ಸಿಂಗಟಾಲೂರು ಏತ ನೀರಾವರಿ, ಬಹದ್ದೂರ್ ಬಂಡಿ ಯೋಜನೆ ಸೇರಿ 14 ನೀರಾವರಿ ಯೋಜನೆಗೆ ಮೊದಲ ಬಜೆಟ್ ನಲ್ಲಿ ಅನುದಾನ ತಂದು ನೆನಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಇದನ್ನೇ ನಂಬಿ ಕೊಪ್ಪಳ ಮತಕ್ಷೇತ್ರದ ಜನತೆ ಮತ ಹಾಕಿ ಮೂರನೇ ಬಾರಿಗೆ ಆಯ್ಕೆ ಮಾಡಿದ್ದರು. ಆದರೆ, ಬಜೆಟ್ ನಲ್ಲಿ ಕೊಪ್ಪಳ ಕ್ಷೇತ್ರದ ಯಾವೊಂದು ನೀರಾವರಿ ಯೋಜನೆ ಬಗ್ಗೆ ಪ್ರಸ್ತಾಪವಾಗಿಲ್ಲ. ಸಿಎಂ ಮಾನಸಪುತ್ರರಿಗೆ ಅನುದಾನ ತರಲಿಲ್ಲವೆಂದು ಕ್ಷೇತ್ರದ ಜನತೆ ಆಕ್ರೋಶಗೊಂಡಿದ್ದಾರೆ. ನುಡಿದಂತೆ ನಡೆಯುತ್ತೇವೆ ಎಂದ ಶಾಸಕರು ಮಾತು ತಪ್ಪಿದ್ದಾರೆ ಎಂದು ದೂರಿದರು.
ಇನ್ನು ಕೊಪ್ಪಳ ವಿಮಾನ ನಿಲ್ದಾಣ ನಿರ್ಮಿಸಿಯೇ ಬಿಡುತ್ತೇನೆ ಎಂದು ರಾಜಾರೋಷವಾಗಿ ಹೇಳಿ ಮತ ಪಡೆದ ಶಾಸಕರು, ಬಜೆಟ್ ನಲ್ಲಿ ಸೇರಿಸಲು ವಿಫಲರಾಗಿದ್ದಾರೆ. ಸಿಎಂ ಜತೆ ಇರುವ ಶಾಸಕರ ಕ್ಷೇತ್ರಕ್ಕೆ ಅನುದಾನ ಇಲ್ಲವೆಂಬುದೇ ಹಾಸ್ಯಾಸ್ಪದವಾಗಿದೆ. ಬಿಜೆಪಿ ಸರ್ಕಾರ ಅವಧಿಯಲ್ಲಿ ಕೊಪ್ಪಳ ವಿಮಾನ ನಿಲ್ದಾಣದ ಕನಸಿಗೆ ಜೀವ ಬಂದಿತ್ತು. ಆದರೆ, ಕಾಂಗ್ರೆಸ್ ಸರ್ಕಾರವು ಕನಸನ್ನು ಕನಸಾಗಿಯೇ ಉಳಿಸಿದೆ. ಯಲಬುರ್ಗಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೊಪ್ಪಳ ವಿಶ್ವವಿದ್ಯಾಲಯ ವನ್ನು ಜಿಲ್ಲಾ ಕೇಂದ್ರ ಸ್ಥಳದಲ್ಲಿ ತರುವುದಾಗಿ ಹೇಳಿದ್ದ ಶಾಸಕರಿಗೆ ಬಜೆಟ್ ಮುಖಭಂಗವಾಗಿದೆ ಎಂದು ಕಿಡಿಕಾರಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತರ ತುಷ್ಠಕರಣ ಮಾಡುವ ಶಾಸಕರಿಗೆ ಬಜೆಟ್ ನಲ್ಲಿ ಅಲ್ಪಸಂಖ್ಯಾತರನ್ನೇ ಕಡೆಗಣಿಸಿದ್ದಾರೆ. ಈ ಸಮುದಾಯದ ಜನತೆಗೆ ನೀಡಿದ್ದ ಹಲವಾರು ಭರವಸೆಗಳು ಭರವಸೆಯಾಗಿಯೇ ಉಳಿದಿವೆ. ಅಲ್ಪಸಂಖ್ಯಾತರನ್ನು ಮತಬ್ಯಾಂಕ್ ಆಗಿ ಮಾತ್ರವೇ ಪರಿಗಣಿಸಿರುವುದು ಬಜೆಟ್ ನಿಂದ ಸ್ಪಷ್ಟವಾಗಿದೆ ಎಂದರು.
ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂ. ಇದೆ. ಆದರೆ, ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಕೊಡುಗೆ ಏನೂ ಇಲ್ಲ. ಕೊಪ್ಪಳದ ಜನತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದರು. ಆದರೆ, ಸರ್ಕಾರ ಸಾಸಿವೆಯಷ್ಟು ನಿರೀಕ್ಷೆ ಈಡೇರಿಸಿಲ್ಲ. ಕಾಂಗ್ರೆಸ್ ನಾಯಕರು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ? ಕೊಪ್ಪಳದ ಜನತೆ ಬಜೆಟ್ ನಲ್ಲಿ ಅನ್ಯಾಯವಾಗಿರುವುದನ್ನು ಗಮನಿಸಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ಗೆ ಪಾಠ ಕಲಿಸಲಿದ್ದಾರೆ. ಇನ್ನು ಅಧಿಕಾರಕ್ಕೆ ಬಂದು 50 ದಿನಗಳೂ ಕಳೆದಿಲ್ಲ. ಅಷ್ಟರಲ್ಲಿಯೇ ರಾಜ್ಯದಲ್ಲಿ ವರ್ಗಾವಣೆ ದಂಧೆ ಶುರುವಾಗಿದೆ. ಯಾವುದೇ ಷರತ್ತು ಇಲ್ಲದೇ ಗ್ಯಾರೆಂಟಿ ಅನುಷ್ಠಾನ ಮಾಡುತ್ತೇವೆ ಎಂದು ಷರತ್ತುಗಳನ್ನು ವಿಧಿಸಿದ್ದಾರೆ. ಜನತೆಗೆ ವಿಶ್ವಾಸದ್ರೋಹ ಬಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಲಗಿ ಅಭಿವೃದ್ಧಿಗಿಲ್ಲ ಮನ್ನಣೆ: ರಾಜ್ಯದಲ್ಲಿಯೇ ಹೆಚ್ಚು ಭಕ್ತರು ಹಾಗೂ ಅಧಿಕ ಆದಾಯ ಇರುವ ಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿ ಗೆ ಬಜೆಟ್ ನಲ್ಲಿ ಮನ್ನಣೆ ಸಿಕ್ಕಿಲ್ಲ. ಹುಲಿಗೆಮ್ಮನ ಸನ್ನಿಧಾನದಲ್ಲಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಹೇಳಿದ್ದ ಶಾಸಕರು, ಬಜೆಟ್ನಲ್ಲಿ ಅನುದಾನ ಮೀಸಲಿಟ್ಟಿಲ್ಲ. ಹುಲಿಗೆಮ್ಮನ ಸನ್ನಿಧಾನದಲ್ಲಿ ಮೂಲಸೌಕರ್ಯ, ವಸತಿ ಸೇರಿ ಸಮಗ್ರ ಅಭಿವೃದ್ಧಿ ಶಾಸಕರ ಮಾತಿಗಷ್ಟೇ ಸೀಮಿತವಾಗಿದೆ ಎಂದು ಆರೋಪಿಸಿದ್ದಾರೆ.