ಕ್ಷೇತ್ರದ ಜನರ ಕುಂದುಕೊರತೆಗಳನ್ನು ಆಲಿಸಲು ಚಿಕ್ಕಬಳ್ಳಾಪುರ ಶಾಸಕರಾದ ಶ್ರೀ ಪ್ರದೀಪ್ ಈಶ್ವರ್ ಅವರ ನೂತನ ವೆಬ್ಸೈಟ್ “pradeepeshwarmla.com” ಅನ್ನು ಚಿಕ್ಕಬಳ್ಳಾಪುರದಲ್ಲಿ ಸ್ಥಳೀಯ ಮುಖಂಡರುಗಳಿಂದ ಶನಿವಾರ ಬಿಡುಗಡೆ ಮಾಡಲಾಯಿತು.
ನಗರದ ಹೊರವಲಯದ ಸಿಯೇರಾ ಹೋಟೆಲ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವೆಬ್ಸೈಟ್ ಅನಾವರಣಗೊಳಿಸಲಾಯಿತು.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಅವರು, ವೆಬ್ಸೈಟ್ನ ಕಾರ್ಯವೈಖರಿ ಕುರಿತು ತಿಳಿವಳಿಕೆ ನೀಡಿದರು. ಜನರು ಅವರ ಕುಂದುಕೊರತೆಗಳನ್ನು ಕುರಿತು ದೂರು ನೀಡಲು ಶಾಸಕರ ಕಚೇರಿಗೆ ಅಲೆದಾಡುವ ಪ್ರಸಂಗ ಬರಬಾರದು ಎನ್ನುವ ಕಾರಣದಿಂದ pradeepeshwarmla.com” ವೆಬ್ಸೈಟ್ ಕಾರ್ಯರೂಪಕ್ಕೆ ತರಲಾಗಿದೆ. ದಯವಿಟ್ಟು ಜನರು ಈ ವೆಬ್ಸೈಟ್ ಅನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಕೋರಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಕಲ್ಪಿಸಲು ಕಾರ್ಪೋರೆಟ್ ಮಾದರಿಯಲ್ಲಿ ವೆಬ್ಸೈಟ್ ಅನಾವರಣಗೊಳಿಸಲಾಗಿದೆ. ಅದಕ್ಕಾಗಿ 100 ಜನ ಪರಿಣಿತರನ್ನು ನಿಯೋಜಿಸಲಾಗಿದೆ. ಈ ವೆಬ್ಸೈಟ್ನ ಸದ್ಭಳಕೆ ಕುರಿತು ಜನರಿಗೆ ಸಹಾಯವಾಗಲೆಂದು ಪ್ರತೀ ಶಾಲೆಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕ್ಷೇತ್ರದ ಪ್ರತೀ ಮನೆಗೂ “ವೆಬ್ಸೈಟ್ ಕ್ಯೂಆರ್ ಕೋಡ್” ಒಳಗೊಂಡ ಪ್ರತಿಯನ್ನು ಅಂಟಿಸಲಾಗುವುದು. ಅದನ್ನು ಸ್ಕ್ಯಾನ್ ಮಾಡುವುದರ ಮೂಲಕ ತಮ್ಮ ದೂರುಗಳನ್ನು ಸುಲಭವಾಗಿ ನೊಂದಾಯಿಸಬಹುದಾಗಿದೆ. ದೂರುಗಳನ್ನು ನೊಂದಾಯಿಸಿದ ನಂತರ ತ್ವರಿತವಾಗಿ ಸ್ಪಂದಿಸುತ್ತೇನೆಂದು ಈ ಸಂದರ್ಭದಲ್ಲಿ ಶಾಸಕರು ವಿಶ್ವಾಸ ನೀಡಿದರು.
“ನನ್ನ ಕನಸಿನ ಚಿಕ್ಕಬಳ್ಳಾಪುರ” ಪರಿಕಲ್ಪನೆಯೊಂದಿಗೆ ಕೆಲಸ ಮಾಡಲು ಪಣತೊಟ್ಟಿದ್ದೇನೆ. ಒಬ್ಬ ಸಾಮಾನ್ಯ ವ್ಯಕ್ತಿಯಾದ ನಾನು ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ದು ಮೂಲಭೂತ ಸೌಕರ್ಯ, ಉತ್ತಮ ಶಿಕ್ಷಣ, ಆರೋಗ್ಯ ಹಾಗೂ ಯುವಕರಿಗೆ ಉದ್ಯೋಗ ಒದಗಿಸುವುದು ನನ್ನ ಪ್ರಮುಖ ಧ್ಯೇಯ. ಈ ನಿಟ್ಟಿನಲ್ಲಿ ನಮ್ಮ ವೆಬ್ಸೈಟ್ ಬಿಡುಗಡೆಯು ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಆಸ್ಪತ್ರೆ ಎರಡೂ ನನ್ನ ದೇವಾಲಯಗಳು. ಈ ದೇವಾಲಯಗಳ ಅಭಿವೃದ್ಧಿಗಾಗಿ ನಾನು ಸದಾ ಶ್ರಮವಹಿಸುವೆ. ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು. ನನ್ನ ಜಿಲ್ಲೆಯ ಹತ್ತನೇ ತರಗತಿಯಲ್ಲಿ ಓದುತ್ತಿರುವ ಸರ್ಕಾರಿ ಶಾಲಾ ಮಕ್ಕಳ ಫಲಿತಾಂಶ ಶೇ.100 ರಷ್ಟಾಗಬೇಕು. ಕ್ಷೇತ್ರದ ವಿದ್ಯಾರ್ಥಿಗಳ ಭವಿಷ್ಯವನ್ನು ಅದ್ಭುತವಾಗಿ ರೂಪಿಸಲು IAS/KAS/NEET/CET/IIT ನಂತಹ ಪ್ರವೇಶ ಪರೀಕ್ಷೆಗಳನ್ನು ಎದುರಿಸಲು ಉಚಿತ ತರಬೇತಿ ಕೇಂದ್ರವನ್ನು ನನ್ನ ಕ್ಷೇತ್ರದಲ್ಲಿ ಪ್ರಾರಂಭ ಮಾಡಬೇಕೆಂಬುದು ನನ್ನ ಗುರಿ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಮುಖಂಡರು ಉಪಸ್ಥಿತರಿದ್ದರು.