ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.10: ಪಶು ಸಂಗೋಪನಾ ಇಲಾಖೆಗೆ 200 ಇನ್ಸ್ಪೆಕ್ಟರ್ ಹುದ್ದೆಳನ್ನು ಒಂದೆರಡು ತಿಂಗಳಲ್ಲಿ ಮತ್ತು ಡಿಸೆಂಬರ್ ವೇಳೆಗೆ 400 ವೈದ್ಯಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಶು ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳ ಕೊರತೆ ಕುರಿತು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.
ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಅನೇಕ ಕಡೆಗಳಲ್ಲಿ ವೈದ್ಯಾಧಿಕಾರಿಗಳ ಕೊರತೆ ಇರುವುದು ಗಮನಕ್ಕೆ ಬಂದಿದೆ. ಹೊಸದಾಗಿ ಮಾಡಿಕೊಳ್ಳುತ್ತಿರುವ ನೇಮಕಾತಿಯಲ್ಲಿ ಕೊರತೆ ಇರುವ ಜಿಲ್ಲೆಗಳಿಗೆ ಮೊದಲ ಆದ್ಯತೆ ನೀಡಿ ಭರ್ತಿ ಮಾಡಲಾಗುವುದು ಎಂದು ಹೇಳಿದರು.
ಇದಷ್ಟೇ ಅಲ್ಲದೆ, ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿಗಳು ಇತರೆ ಇಲಾಖೆಗೆ ಎರವಲು ಸೇವೆಯಲ್ಲಿ ಹೋಗಿದ್ದಾರೆ. ಅಂತವರನ್ನು ಪಟ್ಟಿಮಾಡಿ ಮರಳಿ ಇಲಾಖೆಗೆ ಕರೆತರುವ ಮೂಲಕ ಅವರನ್ನು ಕೊರತೆ ಇರುವ ಕಡೆಗಳಲ್ಲಿ ನಿಯೋಜಿಸಲಾಗುವುದು ಎಂದು ಹೇಳಿದರು.
ಸದನದಲ್ಲಿ ‘ಸುದ್ದಿಮೂಲ’ ವರದಿ ಪ್ರದರ್ಶನ
ರಾಜ್ಯದಲ್ಲಿ ಪಶು ಸಂಗೋಪನಾ ಇಲಾಖೆಯಲ್ಲಿ ವೈದ್ಯಾಧಿಕಾರಿಗಳ ಕೊರತೆ ಕುರಿತು ಚರ್ಚೆ ನಡೆಯುತ್ತಿರುವ ವೇಳೆ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಬೀದರ್ನಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿನ ಅವ್ಯವಸ್ಥೆಗಳ ಕುರಿತು ‘ಸುದ್ದಿಮೂಲ’ ಪತ್ರಿಕೆಯಲ್ಲಿ ಬಂದ ಲೇಖನವನ್ನು ಪ್ರದರ್ಶಿಸಿ ಸದನದ ಗಮನ ಸೆಳೆದರು.
ಪಶು ವೈದ್ಯರ ಕೊರತೆ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಪಶು ವೈದ್ಯರು ರೂಪುಗೊಳ್ಳುವಂತಹ ವಿಶ್ವವಿದ್ಯಾಲಯದ ಹಾಸ್ಟೆಲ್ ಕಟ್ಟಡ ಸೋರುತ್ತಿದೆ. ವಿರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ. ಅಲ್ಲದೆ, ಹಾಸ್ಟೆಲ್ ಊಟದಲ್ಲಿಯೂ ಸಹ ಸಾಕಷ್ಟು ಲೋಪಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಆಗ ಮಧ್ಯ ಪ್ರವೇಸಿದ ಸ್ಪೀಕರ್, ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದ್ದರೆ, ಅದಕ್ಕೆ ನಾಳೆ ಪ್ರತ್ಯೇಕ ನೋಟಿಸ್ ಕೊಡಿ. ಈ ಬಗ್ಗೆ ಸವಿವರವಾಗಿ ಚರ್ಚಿಸೋಣ ಎಂದು ಹೇಳಿದರು.