ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.10: ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ಅವರಿಗೆ ಶ್ರೀಲಂಕಾದಲ್ಲಿ ಹೃದಯಾಘಾತವಾಗಿದ್ದು, ಅವರನ್ನು ಶ್ರೀಲಂಕಾದಿಂದ ಏರ್ಲಿಫ್ಟ್ ಮಾಡುವ ಮೂಲಕ ಬೆಂಗಳೂರಿಗೆ ತರಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸೋಮವಾರ ರಾತ್ರಿ ವೇಳೆಗೆ ಅವರನ್ನು ಬೆಂಗಳೂರಿಗೆ ಕರೆತಂದು ಬಳಿಕ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಕರೆದೊಯ್ಯಲಾಗುವುದು ಎಂಬ ಮಾಹಿತಿ ಸಿಕ್ಕಿದೆ.
83 ವರ್ಷ ವಯಸ್ಸಿನ ಕಸ್ತೂರಿ ರಂಗನ್ ಭಾರತದ ಹೆಸರಾಂತ ವಿಜ್ಞಾನಿ. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪ್ರತಿಷ್ಠಿತ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಅವರನ್ನು ಗೌರವಿಸಲಾಗಿದೆ. ಕಸ್ತೂರಿರಂಗನ್ ಅವರ ಆರೋಗ್ಯ ಮತ್ತು ಚಿಕಿತ್ಸೆಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಕಸ್ತೂರಿ ರಂಗನ್ ಅವರಿಗೆ ಹಠಾತ್ ಹೃದಯಾಘಾತ ಆಗಿದ್ದರಿಂದ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.