ಸುದ್ದಿಮೂಲ ವಾರ್ತೆ
ಹೊಸಕೋಟೆ, ಜು 12 : ಜನಸಂಖ್ಯೆಯನ್ನು ತಡೆಯದೆ ಆರ್ಥಿಕ ಅಭಿವೃದ್ಧಿ ಬಗ್ಗೆ ಚಿಂತಿಸುವುದು ಪ್ರವಾಹದ ನೀರಿನಲ್ಲಿ ಮನೆ ನಿರ್ಮಿಸಿದಂತೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ್ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಮಟ್ಟದ 2023ರ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಆರೋಗ್ಯ ಇಲಾಖೆ ಶಾಶ್ವತ ಹಾಗೂ ತಾತ್ಕಾಲಿಕ ಕುಟುಂಬ ಕಲ್ಯಾಣ ವಿಧಾನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಜನಸಂಖ್ಯಾ ನಿಯಂತ್ರಣ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ವೀಣಾ ಮಾತನಾಡಿ, ಹೊಸಕೋಟೆ ತಾಲೂಕಿನಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಈಗಾಗಲೇ ಕ್ಷೇತ್ರ ಮಟ್ಟದ ಆರೋಗ್ಯ ಸಿಬ್ಬಂದಿ ಕರಪತ್ರಗಳೊಂದಿಗೆ ಗುಂಪು ಸಭೆ, ತಾಯಂದಿರ ಸಭೆ, ಮಾಸಿಕ ಸಭೆ ಹೀಗೆ ಎಲ್ಲಾ ಹಂತದಲ್ಲೂ ಜಾಗೃತಿ ಮೂಡಿಸಿ, ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಅರ್ಹ ಫಲಾನುಭವಿಗಳನ್ನು ಕರೆತರುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರತ್ನಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಯಲಕ್ಷ್ಮಿ, ಹೊಸಕೋಟೆ ಸಾರ್ವಜನಿಕ ಆಸತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸತೀಶ್ , ಸೀರೋಗ ತಜ್ಞರಾದ ಡಾ.ಸಬೀನಾ ಭಾನು, ರಾಷ್ಟ್ರೀಯ ಬಾಲಸ್ವಾಸ್ಥ್ಯಕಾರ್ಯಕ್ರಮದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ, ಆರೋಗ್ಯ ನಿರೀಕ್ಷಣಾಧಿಕಾರಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಆರೋಗ್ಯಾಧಿಕಾರಿ ಸೇರಿದಂತೆ ಆಶ ಕಾರ್ಯಕರ್ತೆಯರು ಹಾಜರಿದ್ದರು.
ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ಮುಖ್ಯ. ಕುಟುಂಬ ಯೋಜನೆಗೆ ಆದ್ಯತೆ, ಲಿಂಗ ಅಸಮಾನತೆ, ಬಡತನ, ಶಿಶು ಮರಣ, ಮಾನವ ಹಕ್ಕುಗಳು ಮತ್ತಿತರ ಸಂಗತಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
-ಗುರುರಾಜ್ | ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ
ಹೊಸಕೋಟೆಯಲ್ಲಿ ನಡೆದ ಕಾಠ್ಯಕ್ರಮದಲ್ಲಿ ಜಾಗೃತಿ ಕರಪತ್ರ ಬಿಡುಗಡೆ ಮಾಡಲಾಯಿತು.