ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.13: ದೇವದುರ್ಗ ತಾಲ್ಲೂಕಿನಲ್ಲಿ ಮರುಳು ಮಾಫಿಯಾಕ್ಕೆ ಕಡಿವಾಣ ಹಾಕುತ್ತಿರುವುದರಿಂದ ನನಗೆ ಮತ್ತು ನನ್ನ ಕುಟುಂಬದವರಿಗೆ ನೆಮ್ಮದಿ ಹಾಳಾಗುತ್ತಿದೆ, ಜೀವಭಯ ಕಾಡುತ್ತಿದೆ. ಸರ್ಕಾರ ಕೂಡಲೇ ಸೂಕ್ತ ಭದ್ರತೆ ನೀಡಬೇಕು ಎಂದು ಶಾಸಕಿ ಕರೆಮ್ಮ ನಾಯಕ್ ಅವರು ವಿಧಾನಸಭೆಯಲ್ಲಿ ಆಗ್ರಹಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಕ್ಷೇತ್ರದಲ್ಲಿ ಹಿಂದೆ ಅಧಿಕಾರ ಮಾಡಿದ ಮಾಜಿ ಶಾಸಕರ ಬೆಂಬಲಿಗರು ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ. ಏನೋ ಅನುಮಾನ, ಚಿಂತೆ ಕಾಡುತ್ತಿದೆ. ಇತ್ತೀಚೆಗೆ ಸದನದಲ್ಲಿನ ನನ್ನ ಸೀಟಿಗೆ ಅಪರಚಿತ ವ್ಯಕ್ತಿಯೊಬ್ಬ ಬಂದು ಕುಳಿತಿದ್ದು ನೋಡಿದರೆ ಏನೋ ಅನುಮಾನ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಕ್ರಮ ಮರಳು ಸಾಗಣೆ ಬಂದ್ ಮಾಡಿಸಿದ್ದೇನೆ ಎಂದು ಎರಡು ದಿನಗಳ ಹಿಂದೆ 21 ವರ್ಷದ ನನ್ನ ತಮ್ಮನ ಮಗನನ್ನು ರಸ್ತೆಯಲ್ಲಿ ಬೀಳಿಸಿ ಹಲ್ಲೆ ಮಾಡಲಾಗಿದೆ. ನಾವು ಯಾರಿಗೆ ಹೇಳಬೇಕು. ಯಾರಿಗಾದರೂ ಹೇಳಿದರೆ ನಿಮಗೇ ಅಧಿಕಾರ ಇದೆಯಲ್ಲಾ ಎಂದು ಹೇಳುತ್ತಾರೆ. ಆದರೆ, ನಮಗೆ ಮಾತ್ರ ಅಭದ್ರತೆ ಕಾಡುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿದರು.
ಅಕ್ರಮ ಮದ್ಯ ಮಾರಾಟ, ಮಟ್ಕಾ, ಮರಳು ಮಾಫಿಯಾದಿಂದ ಭಯದ ವಾತಾವರಣ ಇದೆ. ಕೆಟ್ಟ ಶಬ್ಧಗಳಿಂದ ನಿಂದನೆ ಮಾಡುತ್ತಾರೆ. ನಿಮ್ಮ ಮೇಲೆ ಲಾರಿ ಹತ್ತಿಸುತ್ತೇವೆ ಎಂದು ಹೇಳಿದ್ದರು. ಆದರೆ, ಜೀವ ಭಯಬಿಟ್ಟು ಅಕ್ರಮ ಮರಳು ಸಾಗಣೆ ಮಾಡುವ ಜಾಗಕ್ಕೆ ಹೋಗಿದ್ದೆ. ಆದರೆ, ಅಧಿಕಾರಿಗಳಿಗೆ ತಿಳಿಸಿದರೂ ಇನ್ನೂ ಅವರ ಮೇಲೆ ದೂರು ದಾಖಲಿಸಿದ್ದಾರೋ ಇಲ್ಲವೋ ಇನ್ನೂ ತಿಳಿಯುತ್ತಿಲ್ಲ ಎಂದರು.
ನಾನೊಬ್ಬಳು ಬಡವಿ. ಚುನಾವಣೆಗೆ ಯಾವುದೇ ಹಣ ಖರ್ಚು ಮಾಡಿಲ್ಲ. ಕ್ಷೇತ್ರದ ಜನರೇ ನನಗೆ ಹಣ ನೀಡಿ, ಅರಿಶಿಣ ಕುಂಕುಮ ಕೊಟ್ಟು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ನಾನು ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ತೆಗೆದುಕೊಂಡು ಬರುತ್ತೇನೆ ಎಂದಲ್ಲ. ಬದಲಿಗೆ ಅವರಿಗೆ ನೆಮ್ಮದಿಯ ಜೀವನ ಬೇಕಾಗಿದೆ. ಕೆಲವರಿಂದಾಗಿ ಅಂತಹ ನೆಮ್ಮದಿಯ ವಾತಾವರಣೇ ಕಳೆದು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಶಾಸಕಿ ಆಗಲಿ ಎಂದು ಸುಮಾರು 1 ಲಕ್ಷ ಜನ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ. ಆದರೆ, ನನ್ನ ಕ್ಷೇತ್ರದಲ್ಲಿ ಅಧಿಕಾರಿಗಳಿಗೆ ನಾನು ಇನ್ನೂ ಶಾಸಕಿಯಾಗಿ ಕಾಣಿಸುತ್ತಿಲ್ಲ. ಅವರು ತಮ್ಮದೇ ಆದ ಪ್ರತಿಷ್ಠೆಗೆ ಬಿದ್ದಿದ್ದಾರೆ, ಅವರಿಗೆ ಕಾಣದ ಕೈಗಳು ಬೆಂಬಲ ನೀಡುತ್ತಿವೆ. ಶಿಷ್ಟಾಚಾರಕ್ಕಾದರೂ ಅಧಿಕಾರಿಗಳು ಬಂದು ನನ್ನನ್ನು ಶಾಸಕಿ ಎಂದು ಗೌರವಿಸುತ್ತಿಲ್ಲ. ಜಾಲಹಳ್ಳಿ ಎಂಬ ಗ್ರಾಮಕ್ಕೆ ಹೋದಾಗ ಅಲ್ಲಿಯೇ ಪಿಎಸ್ಐ ಇದ್ದರೂ ಬಾರದೆ ಇಬ್ಬರು ಪೇದೆಗಳನ್ನು ಕಳುಹಿಸಿದ್ದಾರೆ. ಗಬ್ಬೂರಿನಲ್ಲಿ ಪಿಎಸ್ಐ ಶಿಷ್ಟಾಚಾರಕ್ಕಾದರೂ ನನ್ನ ಜೊತೆ ಬಂದು ಮಾತನಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ, ಕ್ಷೇತ್ರದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ ಅವರು ಮಟ್ಕಾ ಬರೆಯುವವರನ್ನು ಜನರೇ ಹಿಡಿದು ತಂದು ಪೊಲೀಸರಿಗೆ ಒಪ್ಪಿಸಿದರೆ 300 ರೂ. ದಂಡ ಪಡೆದು ಬಿಟ್ಟು ಕಳುಹಿಸಿಕೊಡುತ್ತಿದ್ದಾರೆ. ನನ್ನ ದೇವದುರ್ಗ ಕ್ಷೇತ್ರದಲ್ಲಿ ಅಕ್ರಮ ಮರಳು, ಮಟಕಾ ತಕ್ಷಣ ಬಂದ್ ಆಗಬೇಕು. ನನಗೆ ಮತ್ತು ನನ್ನ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದು ಸದನದಲ್ಲಿ ಆಗ್ರಹಿಸಿದರು.
ಗೃಹ ಸಚಿವರೊಂದಿಗೆ ಚರ್ಚೆ: ಖಾದರ್
ಕ್ಷೇತ್ರದಲ್ಲಿ ತಮಗೆ ಆಗುತ್ತಿರುವ ತೊಂದರೆ ಮತ್ತು ಭದ್ರತೆ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಧೈರ್ಯ ತುಂಬಿದರು.
ಅಲ್ಲದೆ, ಅನಾಮಿಕ ವ್ಯಕ್ತಿ ವಿಧಾನಸಭೆಯ ನಿಮ್ಮ ಖುರ್ಚಿಯಲ್ಲಿ ಬಂದು ಕುಳಿತಿದ್ದಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಆ ಘಟನೆಯನ್ನು ಗಂಭೀರವಾಗಿ ಪರಿಗಣಿಸುವುದು ಬೇಡ. ನೀವು ತಡವಾಗಿ ಬಂದ ಕಾರಣಕ್ಕಾಗಿ ಅನಾಮಿಕ ಬಂದು ನಿಮ್ಮ ಕುರ್ಚಿಯಲ್ಲಿ ಕುಳಿತಿದ್ದಾರೆ ಎಂದು ಹೇಳಿದರು.