ಸುದ್ದಿಮೂಲ ವಾರ್ತೆ
ಬೆಂಗಳೂರು, ಜು. 14: ನೆಲಮಂಗಲ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಸಂಬಂಧ ಆರ್ಥಿಕ ಇಲಾಖೆಗೆ ನೂತನ ಪ್ರಸ್ತಾವನೆ ಸಲ್ಲಿಸಿ ಆನುಮೋದನೆ ಪಡೆಯಲಾಗುವುದು ಎಂದು ನರಗಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
ವಿಧಾನಸಭೆಯಲ್ಲಿ ನೆಲಮಂಗಲ ಶಾಸಕ ಎನ್. ಶ್ರೀನಿವಾಸಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲ ದಿನಗಳ ಹಿಂದೆ ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆ ನಡೆದ ಸಭೆಯಲ್ಲಿ ಈ ಸಂಬಂಧ ಚರ್ಚಿಸಲಾಗಿದೆ. ಈ ಪಟ್ಟಣಕ್ಕೆ ಒಳಚರಂಡಿ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ನೆಲಮಂಗಲ ನಗರಸಭೆ ವ್ಯಾಪ್ತಿಗೆ ಇತ್ತೀಚೆಗೆ ವಿಲೀನಗೊಂಡ ಗ್ರಾ.ಪಂ. ಪ್ರದೇಶಗಳ ವ್ಯಾಪ್ತಿಯೂ ಸೇರಿದಂತೆ 236 ಕೋಟಿ ರೂ.ಗಳ ವೆಚ್ಚದಲ್ಲಿ ಸಮಗ್ರ ಒಳಚರಂಡಿ ಯೋಜನೆ ಕೈಗೊಳ್ಳಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 2022ರ ಏಪ್ರಿಲ್ನಲ್ಲಿ ವಿಸ್ತೃತ ಯೋಜನಾ ವರದಿ ಸಲ್ಲಿಸಲಾಗಿತ್ತು. ಆದರೆ, ಆರ್ಥಿಕ ಇಲಾಖೆ ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು.
ಹಾಗೆಂದು ಸುಮ್ಮನೆ ಇರಲೂ ಸಾಧ್ಯವಿಲ್ಲ. ಈ ಪ್ರಸ್ತಾವನೆಯನ್ನು ಪರಿಷ್ಕರಿಸಿ ಯೋಜನಾ ವರದಿಯಲ್ಲಿ ಸಹ ಕೆಲ ಮಾರ್ಪಾಡುಗಳನ್ನು ಮಾಡಿ ಹೊಸದಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು. ಅದಕ್ಕೆ ಆರ್ಥಿಕ ಇಲಾಖೆ ಅನುಮೋದನೆ ಸಹ ಪಡೆಯಲಾಗುವುದು. ಆದಷ್ಟು ಶೀಘ್ರವಾಗಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವ ಬೈರತಿ ಸುರೇಶ್ ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ಶ್ರೀನಿವಾಸಯ್ಯ, ಬೆಂಗಳೂರಿನ ಭಾಗವಾಗಿರುವ ನೆಲಮಂಗಲದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ ಎಂದರೆ ಹೇಗೆ? ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದಾಗ ಆರ್ಥಿಕ ಇಲಾಖೆ ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿರುವುದು ಸರಿಯಲ್ಲ. ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ನೆಲಮಂಗಲ ಪಟ್ಟಣಕ್ಕೆ ಸೂಕ್ತ ಒಳಚರಂಡಿ ವ್ಯವಸ್ಥೆ ಒದಗಿಸಬೇಕು ಎಂದು ಮನವಿ ಮಾಡಿದರು.