ಸುದ್ದಿಮೂಲ ವಾರ್ತೆ
ಮೈಸೂರು, ಜು. 14:ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಎಲ್ಲಾ ಅಗತ್ಯವಾದ ಕ್ರಮಗಳನ್ನು ಕೈಗೊಂಡು, ದಸರಾ ಪ್ರಾರಂಭಕ್ಕೂ ಮುನ್ನ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಮುಖ್ಯಸ್ಥರು ಹಾಗೂ ನ್ಯಾಯಮೂರ್ತಿ ಸುಭಾಷ್ ಬಿ ಅಡಿ ಅವರು ಹೇಳಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಕಸ ವಿಲೇವಾರಿ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಂಧ್ರಕ್ಕೆ ತಿರುಪತಿ ಹೇಗೆ ಪ್ರಮುಖವೋ, ಕರ್ನಾಟಕದಲ್ಲಿ ಅಷ್ಟೇ ಪ್ರಮುಖ ಚಾಮುಂಡಿ ಬೆಟ್ಟ. ಪರಿಸರವನ್ನು ಸಂರಕ್ಷಿಸುವಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಚಾಮುಂಡಿ ಬೆಟ್ಟಕ್ಕೆ ಪ್ರವೇಶ ಮಾಡುವ ಪ್ರದೇಶದಲ್ಲಿಯೇ ಪ್ಲಾಸ್ಟಿಕ್ ಕೊಂಡೊಯ್ಯದಂತೆ ಪರಿಶೀಲಿಸಬೇಕು. ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಗಳ ಬಳಕೆ ನಿಷೇಧಿಸಿ 20 ಲೀಟರ್ ನ ಕ್ಯಾನ್ ನೀರನ್ನು ಪೇಪರ್ ಕಪ್ ನಲ್ಲಿ ಬಳಸಬೇಕು ಸೂಚಿಸಿದರು.
ಚಾಮುಂಡಿಬೆಟ್ಟ ಪ್ಲಾಸ್ಟಿಕ್ ಬೆಟ್ಟ ಮುಕ್ತ ಮಾಡಲು ಅಲ್ಲಿನ ಗ್ರಾಮ ಪಂಚಾಯಿತಿ ಹಾಗೂ ದೇವಸ್ಧಾನ ಮಂಡಳಿ ಸೇರಿ ಅಂಗಡಿ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಕ್ರಮವಹಿಸಬೇಕು. ಬಳಸಿದರೆ ದಂಡ ವಿಧಿಸುವ ಕೆಲಸ ಆಗಬೇಕು. ಕಾನೂನು ಪಾಲನೆ ಮಾಡದಿದ್ದರೆ ಲೈಸನ್ಸ್ ರದ್ದು ಪಡಿಸಿ, ದೇವಸ್ಧಾನದ ಪ್ರವೇಶದಲ್ಲಿ ಪ್ಲಾಸ್ಟಿಕ್ ತರದಂತೆ ಪರಿಶೀಲಿಸಬೇಕು ಎಂದರು.
ಹೊಟೇಲ್ ಗಳಲ್ಲಿ, ಬೀದಿ ಬದಿ ವ್ಯಾಪಾರಿಗಳು ಏಕ ಬಳಕೆಯ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಬೇಕು. ಕಾನೂನು ಪಾಲಿಸದಿದ್ದರೆ ದಂಡ ಹಾಕಿ. ಮೈಸೂರನ್ನು ಸ್ವಚ್ಛ ನಗರಿಯಾಗಿ ಇಟ್ಟುಕೊಳ್ಳಬೇಕು. ಏಕ ಬಳಕೆಯ ಪ್ಲಾಸ್ಟಿಕ್ ನ್ನು ನಿಷೇಧಿಸಿದ ಮೊದಲ ನಗರ ಮೈಸೂರು. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಮಾತನಾಡಿ, ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಿದ್ದು, ಬಳಕೆದಾರರಿಗೆ ದಂಡ ವಿಧಿಸಲಾಗುತ್ತಿದೆ. ಚಾಮುಂಡಿ ಬೆಟ್ಟಕ್ಕೆ ಏಕ ಬಳಕೆಯ ಪ್ಲಾಸ್ಟಿಕ್ ತೆಗೆದುಕೊಂಡು ಹೋಗದಂತೆ ತಡೆಯಲಾಗಿದೆ. ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನೀರನ್ನು ಬಳಸದೆ ಪೇಪರ್ ಅಥವಾ ಗಾಜಿನ ಲೋಟದಲ್ಲಿ ನೀರನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ, ನಗರ ಪೊಲೀಸ್ ಆಯುಕ್ತ ಬಿ. ರಮೇಶ್, ಎಸ್ಪಿಸೀಮಾ ಲಾಟ್ಕರ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ ದಿನೇಶ್ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಇದ್ದರು.