ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.14: ಬರುವ ಶೈಕ್ಷಣಿಕ ವರ್ಷದಿಂದ ಹಿಂದುಳಿದ ವರ್ಗಕ್ಕೆ ಸೇರಿದ ಎಲ್ಲಾ ವಸತಿ ನಿಲಯಗಳನ್ನು ಶೈಕ್ಷಣಿಕ ವರ್ಷದ ಜೊತೆಗೇ ಆರಂಭಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಶಿವರಾಜ್ ತಂಗಡಗಿ ವಿಧಾನ ಪರಷತ್ತಿಗೆ ತಿಳಿಸಿದರು.
ಛಲವಾದಿ ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೋವಿಡ್ ನಂತರ ಶೈಕ್ಷಣಿ ವರ್ಷಗಳ ಆರಂಭದಲ್ಲಿ ಏರುಪೇರು ಉಂಟಾಗಿದ್ದರಿಂದ ಈ ಸದಸ್ಯೆ ಎದುರಾಗಿದೆ. ಜೊತೆಗೆ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಫಲಿತಾಂಶ ತಡವಾದ್ದರಿಂದ ವಸತಿ ನಿಲಯಗಳು ಆರಂಭ ವಿಳಂಬವಾಗಿದೆ. ಬರುವ ವರ್ಷದಿಂದ ಶಾಲಾ ಕಾಲೇಜು ಮತ್ತು ಹಾಸ್ಟೆಲ್ಗಳನ್ನು ಜೊತೆ ಜೊತೆಗೇ ಆರಂಭಿಸಲಾಗುವುದು ಎಂದರು.
ಇದೇ ವೇಳೆ ಡಿ.ಎಸ್. ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ತಂಗಡಗಿ, ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಗೆ ಒಳಪಡುವ 10 ನಿಗಮ ಮಂಡಳಿಗಳಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಯಾಗಿದ್ದು, ಆನುಷ್ಠಾನಕ್ಕೆ ಸ್ವಲ್ಪ ವಿಳಂಬವಾಗಿದೆ. ಬಜೆಟ್ ಒಪ್ಪಿಗೆ ಪಡೆದ ನಂತರ ಅನುದಾನ ಪಡೆದು ಯೋಜನೆಗಳ ಜಾರಿ ಚುರುಕುಗೊಳಿಸಲಾಗುವುದು ಎಂದು ತಿಳಿಸಿದರು.
ವಿವಿಧ ನಿಗಮಗಳ ವತಿಯಿಂದ ಕೊರೆಸಲಾದ ಗಂಗಾಕಲ್ಯಾಣ ಯೋಜನೆಯಡಿ ಒಂದು ಸಾವಿರ ಕೊಳವೆ ಬಾವಿಗಳು ಕೊರೆದಿದ್ದು, ಶೇ 40ರಷ್ಟು ಪೂರ್ಣಗೊಂಡಿವೆ. ವರ್ಷಾಂತ್ಯಕ್ಕೆ ಎಲ್ಲಾ ಪೂರ್ಣಗೊಳಿಸುವುದರ ಜೊತೆಗೆ ನಿಗಮಗಳ ವಿವಿಧ ಫಲಾನುಭವಿಗಳಿಗೆ ಡಿಬಿಟಿ ಮೂಲಕ ನಗದು ವರ್ಗಾವಣೆ ಮಾಡಲಾಗುವುದು ಮತ್ತು ಒಕ್ಕಲಿಗ ಅಭಿವೃದ್ಧಿ ನಿಗಮದ ವತಿಯಿಂದ ಈ ಹಿಂದೆ ಶಾಸಕರು ಆಯ್ಕೆ ಮಾಡಿದ ಫಲಾನುಭವಿಗಳ ಪಟ್ಟಿಯನ್ನೇ ಮುಂದುವರಿಸಿ ಅವರಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಇದಕ್ಕೂ ಮನ್ನ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಸಕಾಲಕ್ಕೆ ವಸತಿ ನಿಲಯಗಳು ಆರಂಭಿಸಬೇಕು ಎಂದು ಕೇಳಿದರೆ, ಡಿ.ಎಸ್. ಅರುಣ್ ಮಾತನಾಡಿ ಈ ಹಿಂದಿನ ಸರ್ಕಾರ ವಿವಿಧ ನಿಗಮಗಳಿಂದ ಆಯ್ಕೆಯಾದ ಫಲಾನುಭವಿಗಳಿಗೆ ಸೌಲತ್ತು ಒದಗಿಸುವಂತೆ ಒತ್ತಾಯಿಸಿದರು.