ಸುದ್ದಿಮೂಲ ವಾರ್ತೆ
ಜು,15:ಅಪಘಾತದಲ್ಲಿ ಮೃತಪಟ್ಟ ಚಾಲನಾ ಸಿಬ್ಬಂದಿಗಳ ಎರಡು ಕುಟುಂಬದ ಅವಲಂಬಿತರಿಗೆ ತಲಾ ರೂ.1 ಕೋಟಿ ಅಪಘಾತ ಪರಿಹಾರ ಚೆಕ್ ವಿತರಣೆ
ಇಂದು ಸನ್ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ಮತ್ತು ಮಾನ್ಯ ಅಧ್ಯಕ್ಷರು, ಕರಾರಸಾ ನಿಗಮ ರವರು ನಿಗಮದ ಕೇಂದ್ರ ಕಛೇರಿಯಲ್ಲಿ ನಿಗಮವು ತನ್ನ ಸಿಬ್ಬಂದಿ ಹಾಗೂ ಅವರ ಅವಲಂಭಿತರ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ಯೋಜನೆಯಡಿ ರೂ.1 ಕೋಟಿ ಅಪಘಾತ ಪರಿಹಾರ ವಿಮೆಯ ಚೆಕ್ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕೆ.ಎಸ್.ಆರ್.ಟಿ.ಸಿ ಯು ದೇಶದಲ್ಲಿಯೇ ಪ್ರಪ್ರಥಮವಾಗಿ ಕಾರ್ಮಿಕ ಕಲ್ಯಾಣದ ವಿನೂತನ ಯೋಜನೆ ಅಡಿಯಲ್ಲಿ ತನ್ನ ಸಿಬ್ಬಂದಿಗಳಿಗೆ ರೂ.1 ಕೋಟಿ ಮೊತ್ತದ ಅಪಘಾತ ವಿಮೆಯನ್ನು ( On duty & Off Duty ಅಪಘಾತ) ಜಾರಿಗೊಳಿಸಿದೆ. ಈ ಯೋಜನೆಯಲ್ಲಿ, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ವತಿಯಿಂದ ಪ್ರೀಮಿಯಂ ರಹಿತ ರೂ 50 ಲಕ್ಷಗಳ ವಿಮೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ರವರಿಂದ ವಾರ್ಷಿಕ ರೂ.885/- ಪ್ರೀಮಿಯಂ (ನೌಕರರಿಂದ) ಪಾವತಿಯ ಮೇರೆಗೆ ರೂ.50 ಲಕ್ಷಗಳ ವಿಮೆಯು ಒಳಗೊಂಡಿರುತ್ತದೆ.
ಈ ಯೋಜನೆಯಡಿಯಲ್ಲಿ ಸಿಬ್ಬಂದಿಗಳು ಕರ್ತವ್ಯದ ಮೇಲಿದ್ದಾಗ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಂದರ್ಭಗಳಲ್ಲಿಯೂ ಉಂಟಾಗುವ ಅಪಘಾತಗಳಿಗೂ* ಸಹ ಈ ವಿಮಾ ಸೌಲಭ್ಯ ಅನ್ವಯಿಸುತ್ತದೆ.
1. ಈ ಯೋಜನೆಯ ಜಾರಿಯ ನಂತರದಲ್ಲಿ ಕೆ.ಎಸ್.ಆರ್.ಟಿ.ಸಿ. ಯ ಚಾಲನಾ ಸಿಬ್ಬಂದಿಗಳಾದ ಶ್ರೀ. ಜಿ.ವಿ.ಚಲಪತಿ, 41 ವರ್ಷ, ಚಾಲಕ-ಕಂ-ನಿರ್ವಾಹಕರು, ಬಿಲ್ಲೆ ಸಂಖ್ಯೆ 7275, ಘಟಕ-6, ಬೆಂಗಳೂರು ಕೇಂದ್ರೀಯ ವಿಭಾಗರವರು ನಿಗಮದಲ್ಲಿ 11 ವರ್ಷಗಳ ಸೇವೆ ಸಲ್ಲಿಸಿರುತ್ತಾರೆ.
ದಿನಾಂಕ 29/01/2023 ರಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಫಘಾತ ಸಂಭವಿಸಿ ಮೃತಪಟ್ಟಿರುತ್ತಾರೆ. ಇವರು ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುತ್ತಾರೆ. ವಿಮಾ ಪರಿಹಾರ ರೂ.1 ಕೋಟಿ ಹೊರತುಪಡಿಸಿ, ನಿಗಮದ ವತಿಯಿಂದ ರೂ.17.21 ಲಕ್ಷ ಪರಿಹಾರಕ್ಕೆ ಅರ್ಹರಿದ್ದು, ಈ ಪೈಕಿ ರೂ.12.71 ಲಕ್ಷ ಪರಿಹಾರ ಈಗಾಗಲೇ ವಿತರಿಸಲಾಗಿದೆ. ಬಾಕಿ ಮೊತ್ತ ರೂ. 4.50 ಲಕ್ಷವನ್ನು ಮೃತ ಅವಲಂಬಿತರು ಸೂಕ್ತ ದಾಖಲಾತಿ ಸಲ್ಲಿಸಿದೊಡನೆ ಭವಿಷ್ಯ ನಿಧಿ ಇಲಾಖೆಯಿಂದ ಶೀಘ್ರದಲ್ಲಿ ಪಾವತಿಯಾಗಲಿದೆ.
2. ಶ್ರೀ. ಪಿ.ಎನ್. ನಾಗರಾಜು, 52 ವರ್ಷ, ಚಾಲಕ-ಕಂ-ನಿರ್ವಾಹಕರು, ಬಿಲ್ಲೆ ಸಂಖ್ಯೆ. 1173, ಘಟಕ-2, ಹಾಸನ ವಿಭಾಗ ರವರು ನಿಗಮದಲ್ಲಿ 17 ವರ್ಷಗಳ ಸೇವೆ ಸಲ್ಲಿಸಿರುತ್ತಾರೆ.
ದಿನಾಂಕ 01/02/2023 ರಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿಮಾಡಿದ ಪರಿಣಾಮ ಅಪಘಾತದಲ್ಲಿ ಮರಣ ಹೊಂದಿರುತ್ತಾರೆ. ಇವರು ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುತ್ತಾರೆ. ವಿಮಾ ಪರಿಹಾರ ರೂ.1 ಕೋಟಿ ಹೊರತುಪಡಿಸಿ, ನಿಗಮದ ವತಿಯಿಂದ ರೂ.21.94 ಲಕ್ಷ ಪರಿಹಾರಕ್ಕೆ ಅರ್ಹರಿದ್ದು, ಈ ಪೈಕಿ ರೂ.16.19 ಲಕ್ಷ ಪರಿಹಾರ ಈಗಾಗಲೇ ವಿತರಿಸಲಾಗಿದೆ. ಬಾಕಿ ಮೊತ್ತ ರೂ. 5.75 ಲಕ್ಷ ಮೃತರ ಅವಲಂಬಿತರು ಸೂಕ್ತ ದಾಖಲಾತಿ ಸಲ್ಲಿಸಿದೊಡನೆ ಭವಿಷ್ಯ ನಿಧಿ ಇಲಾಖೆಯಿಂದ ಶೀಘ್ರದಲ್ಲಿಯೇ ಪಾವತಿಯಾಗಲಿದೆ.
ಸನ್ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ಮತ್ತು ಮಾನ್ಯ ಅಧ್ಯಕ್ಷರು, ಕರಾರಸಾ ನಿಗಮ ರವರು ಈ ಎರಡು ಚಾಲನಾ ಸಿಬ್ಬಂದಿಗಳ ಕುಟುಂಬ ವರ್ಗದವರಿಗೆ ಅಪಘಾತ ಪರಿಹಾರ ವಿಮಾದ ತಲಾ ರೂ.1 ಕೋಟಿಗಳ ಚೆಕ್ ವಿತರಿಸಿ ಸಾಂತ್ವನ ಹೇಳಿದರು.
ಮುಂದುವರೆದು, ಮಾನ್ಯ ಸಚಿವರು ಮಾತನಾಡಿ, ಮೃತಪಟ್ಟ ಚಾಲನಾ ಸಿಬ್ಬಂದಿಗಳನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ, ಅವರ ಕುಟುಂಬಗಳ ಸುಭದ್ರತೆಗಾಗಿ ನಿಗಮವು ಜಾರಿಗೊಳಿಸಿರುವ ಈ ಅಪಘಾತ ಪರಿಹಾರ ವಿಮಾ ಯೋಜನೆಯು ಬಹಳ ಉತ್ತಮವಾಗಿದ್ದು, ಈ ಯೋಜನೆಯನ್ನು ಸಧ್ಯದಲ್ಲಿಯೇ ಇತರೆ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಜಾರಿಗೊಳಿಸಲು ಕೂಡಲೇ ಕ್ರಮ ಜರುಗಿಸಲು ಸೂಚಿಸುವುದಾಗಿ ತಿಳಿಸಿದರು. ಕುಟುಂಬದವರು ಹಣವನ್ನು ಬ್ಯಾಂಕಿನಲ್ಲಿ ಸ್ಥಿರ ಠೇವಣಿಯನ್ನು ಇಟ್ಟು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ತಮ್ಮ ಮುಂದಿನ ಜೀವನಕ್ಕಾಗಿ ಕಾಪಾಡಿಕೊಳ್ಳಬೇಕು. ಅನುಕಂಪ ಆಧಾರದ ಮೇಲಿನ ಕೆಲಸಕ್ಕೆ ಅರ್ಜಿ ಸಲ್ಲಿಸಲು ತಿಳಿಸಿದರು. ನಿಗಮದ ಸಿಬ್ಬಂದಿಗಳ ಹಾಗೂ ಕುಟುಂಬದವರ ಹಿತಾಸಕ್ತಿ ಕಾಪಾಡಲು ನಾವು ನಿಮ್ಮೊಡನೆ ಸದಾ ಇರುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ವಿ. ಅನ್ಬುಕುಮಾರ್ ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ಮಾತನಾಡಿ , ಮಾನ್ಯ ಸಾರಿಗೆ ಸಚಿವರು ಆದೇಶಿಸಿರುವಂತೆ ಕೂಡಲೇ ಅನುಕಂಪ ಆಧಾರದ ಮೇಲೆ ಕೆಲಸಕ್ಕೆ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಸ್ ಬಿ.ಐ ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರುಗಳಾದ ಶ್ರೀ ಹೆಚ್.ವಿ. ಅನಂತ ಸುಬ್ಬರಾವ್, ಶ್ರೀ ಬಿ. ಜಯದೇವರಾಜೇ ಅರಸು, ಶ್ರೀ ಜಿ.ಎಸ್. ಮಹದೇವಯ್ಯ, ಶ್ರೀ ಹೆಚ್.ಡಿ. ರೇವಪ್ಪ, ಶ್ರೀ ಎಸ್. ನಾಗರಾಜ, ಶ್ರೀ ವೆಂಕಟರಮಣಪ್ಪ ಮತ್ತು ಇತರರು ಹಾಗೂ ನಿಗಮದ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದ್ದರು.