ಹೆಗ್ಗಡದೇವನ ಕೋಟೆ, ಜು 15: ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡಗಳನ್ನ ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಮೀಸಲಾತಿ ಕಲ್ಪಿಸುವುದು ಸಂವಿಧಾನ ಬದ್ಧವಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಪ್ರತಿಪಾದಿಸಿದ್ದಾರೆ.
ಹೆಚ್ ಡಿ ಕೋಟೆ ಮತ್ತು ಸರಗೂರು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಘಟಕದ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಕಲ ಜೀವತ್ಮರಿಗೂ ಲೇಸನ್ನೇ ಬಯಸುವ ವೀರಶೈವ ಮತ್ತು ಲಿಂಗಾಯತ ಸಮುದಾಯ 12ನೇ ಶತಮಾನದಲ್ಲೇ ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡಿತು. ಆದರೆ ಇಂದು ಸಮಾಜವೇ ಸಾಮಾಜಿಕ ನ್ಯಾಯ ಕೇಳುವ ಸ್ಥಿತಿ ಬಂದಿದೆ ಎಂದು ತಿಳಿಸಿದರು.
ಸಮಾನತೆಯ ಹರಿಕಾರ, ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಮಾಡಿದ ಸುಧಾರಣೆ ಇಡೀ ವಿಶ್ವಕ್ಕೇ ಮಾದರಿಯಾಗಿದೆ ಎಂದ ಅವರು, ಈ ರಾಜ್ಯಕ್ಕೆ ವೀರಶೈವ ಲಿಂಗಾಯತ ಮಠಮಾನ್ಯಗಳು ನೀಡಿರುವ ಕೊಡುಗೆ ಅಪಾರವಾದದ್ದು ಎಂದು ಪ್ರತಿಪಾದಿಸಿದರು.
ಇವನಾರವ, ಇವನಾರವ ಎನಿಸದೆ, ಇವ ನಮ್ಮವ ಇವ ನಮ್ಮ ಎನ್ನುವ ಉದಾತ್ತ ಚಿಂತನೆಯನ್ನು ಬಸವಣ್ಣನವರು ನೀಡಿದ್ದಾರೆ. ನಾವು ಎಲ್ಲ ಜಾತಿ, ಜನಾಂಗ, ಸಮುದಾಯದವರನ್ನೂ ನಮ್ಮೊಂದಿಗೆ ತೆಗೆದುಕೊಂಡು ಮುಂದೆ ಸಾಗಬೇಕು ಎಂದು ಹೇಳಿದರು.
ಮೂರನೆಯ ಬಾರಿಗೆ ಹೆಗ್ಗಡದೇವನಕೋಟೆಗೆ ತಾವು ಆಗಮಿಸಿದ್ದೇನೆ. ಪ್ರಸ್ತುತ ಅರಣ್ಯ ಸಚಿವನಾಗಿ ಶೇಕಡ 60ರಷ್ಟು ಅರಣ್ಯ ಸಂಪತ್ತಿರುವ ಈ ಭಾಗಕ್ಕೆ ಬಂದಿರುವುದು ಅತಿವ ಸಂತಸ ನೀಡಿದೆ ಎಂದರು.
ಪ್ರಕೃತಿ ಪರಿಸರವಿಲ್ಲದೆ ಮನುಷ್ಯನಿಲ್ಲ, ಇಂದು ಪ್ಲಾಸ್ಟಿಕ್ ತ್ಯಾಜ್ಯದಿಂದ ಹಲವು ಅನಾಹುತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಹಸಿರು ವ್ಯಾಪ್ತಿ ಹೆಚ್ಚಿಸುವ ಅಗತ್ಯವಿದೆ ಕರ್ನಾಟಕದಲ್ಲಿ ಸರಾಸರಿ ಶೇಕಡ 21ರಷ್ಟು ಮಾತ್ರ ಹಸಿರು ವ್ಯಾಪ್ತಿ ಇದೆ, ಆದರೆ ಅತಿ ಹೆಚ್ಚು ಅರಣ್ಯ ಸಂಪತ್ತು ಹೊಂದಿರುವ ಈ ಭಾಗದ ಜನರು ಪುಣ್ಯವಂತರು ಎಂದರು.
ಬಸವಾದಿ ಶರಣರು ಸಾರಿರುವ ತತ್ವಗಳು ಅಮೂಲ್ಯವಾಗಿದ್ದು ಪ್ರತಿನಿತ್ಯ ನಮ್ಮ ಬದುಕಿನಲ್ಲಿ ಬಸವಣ್ಣನರು ಸಾರಿದ ತತ್ವವನ್ನು ಅನುಷ್ಠಾನ ಮಾಡಬೇಕು. ಆಗ ಬಸವ ಜಯಂತಿಗೆ ನಿಜ ಅರ್ಥ ಬರುತ್ತದೆ ಎಂದರು.
ಬುದ್ಧ, ಬಸವಣ್ಣ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರುಗಳು ಸಮ ಸಮಾಜದ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದಾರೆ. ನಮ್ಮ ಸರ್ಕಾರ ಆ ನಿರ್ದೇಶಕ ತತ್ವಗಳ ಮೇಲೆ ಆಡಳಿತ ನಡೆಸುತ್ತದೆ. ಮಹಿಳೆಯರ ಸಬಲೀಕರಣಕ್ಕಾಗಿ ಶಕ್ತಿ ಯೋಜನೆಯನ್ನು ತಂದಿದೆ ಎಂದರು
ಮನವ ಧರ್ಮ ದೊಡ್ಡದಲ್ಲ, ಮಾನವೀಯತೆಯೇ ದೊಡ್ಡದು ಎಂದು ಸಾರಿದ ಬಸವಣ್ಣನವರು ದಯೆಯೇ ಧರ್ಮದ ಮೂಲ ಎಂದಿದ್ದಾರೆ, ಬಸವಣ್ಣನವರ ವಿಚಾರಧಾರೆ ಸಾರ್ವಕಾಲಿಕ ಸತ್ಯವಾಗಿದೆ ಎಂದು ಹೇಳಿದರು.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಎಲ್ಲ 5 ಗ್ಯಾರೆಂಟಿಗಳನ್ನು ಈಡೇರಿಸುತ್ತಿದೆ ಅನ್ನಭಾಗ್ಯ ಯೋಜನೆಗೆ ನಮ್ಮ ಮಠಾಧೀಶರುಗಳು ಮಾಡುತ್ತಿರುವ ಅನ್ನದಾಸೋಹವೆ ಪ್ರೇರಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಚಿವರಾದ ಎಚ್ ಸಿ ಮಹದೇವಪ್ಪ, ಶಾಸಕರಾದ ಅನಿಲ್ ಚಿಕ್ಕಮಾದು, ದರ್ಶನ್ ಧ್ರುವ ನಾರಾಯಣ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು