ಸುದ್ದಿಮೂಲ ವಾರ್ತೆ
ಮಾಲೂರು, ಜು.15: ತಾಲ್ಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಭೂಮಾಫಿಯಗಳ ಜತೆಗೆ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನನ್ನು ಗುಳುಂ ಮಾಡುತ್ತಿದ್ದಾರೆ ಹಾಗೂ ಪಟ್ಟಣದ 5 ಕಿಲೋಮೀಟರ್ ವ್ಯಾಪ್ತಿಯ ಸರ್ಕಾರಿ ಜಮೀನುಗಳನ್ನು
ಸರ್ವೆ ಮಾಡಿ ಸರ್ಕಾರದ ವಶಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ
ತಾಲ್ಲೂಕು ಶಾಖೆ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಬಿ ಎಸ್ ಸುರೇಶ್ ರವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಪಟ್ಟಣ ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಮಾವೇಶಕ್ಕೆ ಆಗಮಿಸಿದ್ದ ಉಸ್ತುವಾರಿ ಸಚಿವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸಂಘಟಿತರು ಮನವಿ ಸಲ್ಲಿಸಿ ಹಾರೋಹಳ್ಳಿ ಸರ್ವೆ ನಂಬರ್ 105 ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಾಗಿ ಮಂಜೂರಾಗಿರುವ ಜಮೀನನ್ನು ಪ್ರಭಾವಿ ಮುಖಂಡರ ಸಹೋದರ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.
ಈ ಜಮೀನನ್ನು ಶಾಲೆಗೆ ಬಿಡಿಸಿಕೊಂಡಬೇಕು ಸರ್ವೆ ನಂಬರ್ 11 .12ರ ಜಮೀನುಗಳನ್ನು ಸರ್ವೆ ಮಾಡಿ ಸರ್ಕಾರದ ವಶಕ್ಕೆ ಪಡೆಯಬೇಕು ಈಗಾಗಲೇ ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ಭೂ ಮಂಜೂರಾತಿ ಮಾಡಬೇಕು, ನೀಲಕಂಠ ಅಗ್ರಹಾರ ಗುಡಿಸಲು ನಿವಾಸಿಗಳಿಗೆ ಹಕ್ಕು ಪತ್ರ ಗಳನ್ನು ನೀಡಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಪರಿಶೀಲನೆ ಮಾಡಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಚವ್ವೇನಹಳ್ಳಿ ವಿಜಿ, ತಾಲ್ಲೂಕು ಸಂಚಾಲಕ ಎಸ್ ಎಮ್ ವೆಂಕಟೇಶ್, ಬಂಡಹಟ್ಟಿ ನಾರಾಯಣಸ್ವಾಮಿ, ತಿರುಮಲೇಶ್, ಅಂಗಶೆಟ್ಟಿಹಳ್ಳಿ ನಾರಾಯಣಸ್ವಾಮಿ , ಶಾಮಣ್ಣ, ಬಿಂಗಿಪುರ ವೆಂಕಟೇಶ್, ಹಾರೋಹಳ್ಳಿ ಮುನಿರಾಜು, ದ್ಯಾಪಸಂದ್ರ ವಿಜಿ.ಮುನಿರಾಜಪ್ಪ, ರಾಹುಲ್ ಚಂದ್ರು, ಅಮರೇಶ್ ಸೇರಿದಂತೆ ಇನ್ನಿತರರು ಇದ್ದರು.