ಬೆಂಗಳೂರು ಜುಲೈ 16:ರಾಷ್ಟ್ರಮಟ್ಟದ ಸ್ವಯಂ ಸೇವಾ ಸಂಸ್ಥೆ ನಾರಾಯಣ್ ಸೇವಾ ಸಂಸ್ಥಾನ್ ವತಿಯಿಂದ ಬೆಂಗಳೂರಿನಲ್ಲಿ ದಕ್ಷಿಣ ರಾಜ್ಯಗಳಿಂದ ಆಗಮಿಸಿದ್ದ ದಿವ್ಯಾಂಗರಿಗೆ ಹೊಂದಿಕೆಯಾಗುವಂತೆ ಅಂಗಾಂಗ ಜೋಡಣೆಗಾಗಿ ಅಂಗ ಮಾಪನ ಶಿಬಿರ ಕಾರ್ಯಕ್ರಮವನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ನಾಗೇಂದ್ರರವರು ಚಾಲನೆ ನೀಡಿದರು.
ಬೆಂಗಳೂರಿನ ವಿ. ವಿ ಪುರಂನಲ್ಲಿರುವ ಡಾ.ಅರಸೋಜಿ ರಾವ್ ಕಲ್ಯಾಣ ಮಂಟಪದಲ್ಲಿ ಇಂದು ಆಯೋಜಿಸಿದ್ದ ಶಿಬಿರದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಕೇರಳ ಆಂಧ್ರಪ್ರದೇಶದಿಂದ ಬಂದಿದ್ದ ದಿವ್ಯಾಂಗರಿಗೆ ಅಗತ್ಯಕ್ಕೆ ತಕ್ಕಂತೆ ಅಂಗಾಂಗಗಳ ಅಳತೆ ತೆಗೆದುಕೊಳ್ಳಲಾಯಿತು. ಅನುಭವಿ ಮೂಳೆ ತಜ್ಞರು, ಪ್ರಾಸ್ತೆಟಿಕ್ ಪರಿಣಿತ ವೈದ್ಯರು ಅಳತೆ ತೆಗೆದುಕೊಂಡರು. ದಿವ್ಯಾಂಗರ ಬದುಕಿನಲ್ಲಿ ಇದು ಹೊಸ ಆಶಾಕಿರಣ ಮೂಡಿಸುವ ಮತ್ತು ಸ್ವಾವಲಂಬಿ ಬದುಕು ಸಾಗಿಸಲು ಕೈಗೊಂಡಿರುವ ಕ್ರಮಗಳ ಕುರಿತು ಸಚಿವರು ಪರಿಣಿತ ವೈದ್ಯರಿಂದ ಮಾಹಿತಿ ಪಡೆದರು.
ಬಳಿಕ ಸಮಾರಂಭದಲ್ಲಿ ಮಾತನಾಡಿದ ಸಚಿವ ಬಿ. ನಾಗೇಂದ್ರ ರವರು ಜೀವನದಲ್ಲಿ ನಿರೀಕ್ಷೆ ಇಲ್ಲದೇ ಸಂಭವಿಸುವ ಅವಘಡದಲ್ಲಿ ಅಮೂಲ್ಯ ಅಂಗಾಂಗಳನ್ನು ಕಳೆದುಕೊಂಡು ಕಷ್ಟದಲ್ಲಿರುವವರಿಗೆ ಸರ್ಕಾರದ ಅರೋಗ್ಯ ಯೋಜನೆಗಳು ಸಹಕಾರಿಯಾಗಿವೆ. ಇದರ ಜೊತೆ ಜೊತೆಗೆ ಇಂತಹ ಸೇವಾ ಸಂಸ್ಥೆಗಳ ಸಮಾಜ ಮುಖಿ ಸೇವೆಯಿಂದ ಆರ್ಥಿಕ ಹೊರೆ ಕಡಿಮೆಯಾಗಿದೆ. ನಾರಾಯಣ ಸೇವಾ ಸಂಸ್ಥೆ 38 ವರ್ಷಗಳಿಂದ ಸುಮಾರು 4 ಲಕ್ಷಕ್ಕೂ ಹೆಚ್ಚು ದಿವ್ಯಾಂಗರಿಗೆ ಶಸ್ತ್ರಚಿಕಿತ್ಸೆ ಮಾಡಿರುವುದು ಸಂಸ್ಥೆಯ ನಿಜವಾಗಿಯೂ ಒಂದು ದೇವರ ಸೇವೆಗೆ ಸಾಕ್ಷಿಯಾಗಿದೆ. 38,200 ಅಂಗವಿಕಲ ಮಕ್ಕಳಿಗೆ, ಪುರುಷರು, ಮಹಿಳೆಯರಿಗೆ ಉಚಿತವಾಗಿ ಕೃತಕ ಅಂಗಾಗ ಜೋಡಣೆ ಮಾಡಿದ್ದು, ಈ ಸೇವೆ ನಿರಂತರವಾಗಿ ಮುಂದುವರೆಯಲಿ ನಿಮ್ಮ ಸೇವಾ ಮನೋಭಾವನೆಯ ಕೈಗೆ ನಮ್ಮ ಸಹಕಾರ ಇರುತ್ತದೆ. ನಾವು ಅನ್ನ ದಾಸೋಹ, ಅಕ್ಷರ ದಾಸೋಹ ಮಾಡುತ್ತೇವೆ. ಆದರೆ ಅಂಗ ದಾನ ಮಾಡುತ್ತಿರುವ ಈ ಸಂಸ್ಥೆಗೆ ನಮ್ಮ ಬಳ್ಳಾರಿ ಜಿಲ್ಲೆಯಿಂದ ಸಾಧ್ಯವಾದ ಎಲ್ಲಾ ನೆರವು ನೀಡುತ್ತೇವೆ. ನಮ್ಮ ಜಿಲ್ಲೆಯ ಕಂಪೆನಿಗಳು, ಕಾರ್ಖಾನೆಗಳಿಂದಲೂ ನೆರವು ನೀಡುತ್ತೇವೆ. ಸಂಸ್ಥೆಯ ಮುಖ್ಯಸ್ಥರಾದ ಕೈಶಾಲ್ ಮಾನವ್ ಜೀವಂತ ದೇವರು. ಇಂತಹ ಉದಾರ ಮನಸು ಇರುವ ಈ ಸಂಸ್ಥೆಗೆ ನಿವೇಶನ ಕೊಡಿಸಲು ಎಲ್ಲಾ ರೀತಿಯ ಪ್ರಯತ್ನಿಸುತ್ತೇನೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹತ್ತಿರ ತಮ್ಮ ಸಂಸ್ಥೆಯ ನಿಯೋಗ ಕರೆದೋಯ್ದು ನಿವೇಶನ ಕೊಡಿಸುವ ಪ್ರಾಮಾಣಿಕ ಮಾಡುತ್ತೇನೆ. ನನ್ನ ಕೊನೆಉಸಿರುವ ಇರುವ ತನಕ ದಿವ್ಯಾಂಗರ ಸೇವೆ ಮಾಡುತ್ತೇನೆ. ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯದಿಂದ ಇಂತಹ ಮಾನವೀಯ ಸೇವೆಗಳಿಗೆ ಸೂಕ್ತ ನೆರವು ನೀಡಲು ಸಿದ್ಧ ಎಂದರು.
ಕಾರ್ಯಕ್ರಮದಲ್ಲಿ ಜನರಲ್ ಮೋಟಾರ್ಸ್ ಕಂಪೆನಿಯ ಮುಖ್ಯಸ್ಥ ಅಮಿತ್ ಭಾತ್ ಪಟೇಲ್, ಉದ್ಯಮಿ ಗಣಪತ್ ಬಾಗ್ಲೇಚಾ, ನಾರಾಯಣ್ ಸೇವಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಭಗವಾನ್ ರಜತ್ ಗೌರ್, ನಾರಾಯಣ್ ಸೇವಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಭಗವಾನ್ ಪ್ರಸಾದ್ ಗೌರ್,ಮತ್ತಿತರರು ಉಪಸ್ಥಿತರಿದ್ದರು.