ಸುದ್ದಿಮೂಲ ವಾರ್ತೆ
ಮೈಸೂರು, ಜು.17: ಭೀಮನ ಅಮವಾಸ್ಯೆ ಹಿನ್ನೆಲೆಯಲ್ಲಿ ಸೋಮವಾರ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಗರ್ಭಗುಡಿ ಒಳಾಂಗಣ ಮತ್ತು ಹೊರಾಂಗಣವನ್ನು ಹಣ್ಣು ತರಕಾರಿ, ಹೂಗಳಿಂದ ಆಕರ್ಷಣೆಯಾಗಿ ಅಲಂಕಾರ ಮಾಡಲಾಗಿತ್ತು.
ಶ್ರೀ ಮಹದೇಶ್ವರ ದರ್ಶನ ಮತ್ತು ಸೇವೆ ಮಾಡಲು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದ ಹಿನ್ನಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ವರ್ಷ ದೇವಾಲಯ ಗರ್ಭಗುಡಿ ಮತ್ತು ಹೊರಾಂಗಣವನ್ನು ವಿವಿಧ ಬಗೆಯ ಹಣ್ಣು, ತರಕಾರಿ ಮತ್ತು ಹೂಗಳಿಂದ ಅಲಂಕಾರ ಮಾಡಲಾಗಿದ್ದು, ದೇವರ ದರ್ಶನಕ್ಕೆ ಬರುವ ಭಕ್ತರ ಕಣ್ಮನ ಸೆಳೆಯುವಂತೆ ಇತ್ತು.
ಭಾನುವಾರ ರಾತ್ರಿಯಿಂದಲೇ ದೇವಾಲಯ ಅಲಂಕಾರ ಮಾಡಿರುವ ಪ್ರಾಧಿಕಾರದ ಸಿಬ್ಬಂದಿಗಳು, ಹಗಲು ಇರಳು ಎನ್ನದೆ ಅತ್ಯಂತ ವಿಜೃಂಭಣೆಯಿಂದ ಅಲಂಕಾರ ಮಾಡಿದ್ದ ಬಗ್ಗೆ ಮೆಚ್ಚಗೆ ವ್ಯಕ್ತವಾಯಿತು. ವಿದ್ಯುತ್ ದೀಪಾಲಂಕಾರ ಕೂಡ ಮಾಡಿದ್ದು, ದೇವಾಲಯಕ್ಕೆ ಬರುವ ಸಾವಿರಾರು ಭಕ್ತರು ದೇವಾಲಯದ ಸೌಂದರ್ಯ ಕಂಡು ಪುಳಕಿತರಾದರು.