ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.19: ರಾಜಧಾನಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಅನುಮಾನದ ಮೇರೆಗೆ ಎನ್ಐಎ ನೀಡಿದ ಮಾಹಿತಿ ಮೇರೆಗೆ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿ ಎಡೆಮುರಿ ಕಟ್ಟಿದ್ದಾರೆ.
ಮುದಾಸಿರ್, ಫೈಜಲ್ ರಬ್ಬಾನಿ, ಸುಹೇಲ್, ಉಮರ್ ಸೇರಿದಂತೆ ಐವರನ್ನು ಬಂಧನ ಮಾಡಲಾಗಿದೆ. ಬಂಧಿತರಿಂದ 40 ಸಜೀವ ಮದ್ದುಗುಂಡುಗಳು, ರಿವಾಲ್ವರ್, ಮೊಬೈಲ್, ಡ್ಯಾಗರ್ ಸೇರಿದಂತೆ ಹಲವು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರ್ಟಿ ನಗರದಲ್ಲಿ 2017ರಲ್ಲಿ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 21 ಮಂದಿ ಅಪರಾಧಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಅದರಲ್ಲಿ ಈಗ ಬಂಧಿತರಾಗಿರುವ ಐವರು ಜೈಲಿನಲ್ಲಿದ್ದ ಶಂಕಿತ ಉಗ್ರರ ನಂಟು ಬೆಳೆಸಸಿಕೊಂಡು ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದರು. ನಗರದ ಹತ್ತು ಕಡೆಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂದು ಸಿಸಿಬಿ ಅಧಿಕಾರಿಗಳ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾರೆ.
ಶಂಕಿತ ಉಗ್ರರಿಗೆ ಜುನೈದ್ ಎಂಬ ವ್ಯಕ್ತಿ ತರಬೇತಿ ನೀಡುತ್ತಿದ್ದ. ಪ್ರತಿದಿನ ಸಂಜೆ ಸೇರುತ್ತಿದ್ದ ಈ ಗುಂಪಿಗೆ ಜುನೈನ್ ಮಾಸ್ಟರ್ ಮೈಂಡ್ ಆಗಿ ಸ್ಫೋಟಗಳನ್ನು ನಡೆಸುವ ಬಗ್ಗೆ ಸಂಚು ರೂಪಿಸಿ ಈ ತಂಡಕ್ಕೆ ಮಾಹಿತಿ ಒದಗಿಸುತ್ತಿದ್ದ ಎನ್ನಲಾಗಿದೆ. ಆದರೆ, ಈ ದಾಳಿ ವೇಳೆ ಜುನೈದ್ ತಲೆಮರೆಸಿಕೊಂಡಿದ್ದು, ಆತನ ಬಂಧಕ್ಕೆ ಸಹ ತೀವ್ರ ಶೋಧ ನಡೆಸಲಾಗುತ್ತಿದೆ.
ಸಿಎಂ, ಗೃಹ ಸಚಿವರ ಶ್ಲಾಘನೆ:
ಶಂಕಿತ ಉಗ್ರರ ಬಂಧನ ಮಾಡಿದ ಸಿಸಿಬಿ ಪೊಲೀಸರ ಕಾರ್ಯಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಉಗ್ರರ ಬಂಧನ ಹಾಗೂ ಕಾರ್ಯಾಚರಣೆ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಗೃಹ ಸಚಿವರು, ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. ಬಂಧಿತರು ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ನಂತರ ಜಾಮೀನು ಮೇಲೆ ಹೊರಗೆ ಬಂದಿದ್ದರು. ನಂತರ ದೇಶದ್ರೋಹಿ ಸಂಘಟನೆಗಳ ಸಂಪರ್ಕಕ್ಕೆ ಬಂದಿದ್ದರು. ಬಂಧಿಕರು ಕರ್ನಾಟಕ ಹಾಗೂ ಇತರೆಡೆಗಳಲ್ಲಿ ಉಗ್ರ ಚಟುವಟಿಕೆಗಳನ್ನು ಕೈಗೊಳ್ಳಲು ಮುಂದಾಗಿದ್ದರು. ಶಂಕಿತರ ಸಂಭವನೀಯ ಉಗ್ರ ಚಟುವಟಿಕೆಗಳನ್ನು ಸಿಸಿಬಿ ಪೊಲೀಸರು ತಡೆದು ಬಂಧಿಸಿದ್ದಾರೆ. ಈ ಶಂಕಿತರು ಯಾವ ಉಗ್ರ ಚಟುವಟಿಕೆಗೆ ಉದ್ದೇಶಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ತಿಳಿಸಿದರು.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸುವ ಮೂಲಕ ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ವಿಫಲಗೊಳಿಸಿರುವ ರಾಜ್ಯದ ಸಿಸಿಬಿ ಪೊಲೀಸರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.