ನೆಲಮಂಗಲ, ಜು.22: ಯಶಸ್ಸಿಗೆ ಅಡ್ಡದಾರಿ ಮಾರ್ಗವಲ್ಲ, ನೇರ ಮಾರ್ಗದಲ್ಲಿ ನಡೆದರೆ ಯಶಸ್ಸು ದೊರಕದೆ ಹೋಗುವುದಿಲ್ಲ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪ್ರತಿಪಾದಿಸಿದ್ದಾರೆ.
ನೆಲಮಂಗಲದಲ್ಲಿಂದು ವೀರಶೈವ ಲಿಂಗಾಯತ ಮಹಾಸಭಾದ ನೆಲಮಂಗಲ ಘಟಕ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಪರಿಶ್ರಮವಿದ್ದರೆ ಪ್ರತಿಫಲ ಇದ್ದೇ ಇರುತ್ತದೆ. ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, ವಿದ್ಯಾರ್ಥಿಗಳು ಸಾಧಿಸುವ ಛಲ ಬೆಳೆಸಿಕೊಳ್ಳಬೇಕು ಎಂದರು.
ವೀರಶೈವ ಲಿಂಗಾಯತ ಮಠ ಮಾನ್ಯಗಳು ಈ ಜಗತ್ತಿಗೆ ನೀಡಿರುವ ಕೊಡುಗೆ ಅನುಪಮವಾದ್ದು. ಧರ್ಮ ಪ್ರಚಾರದ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಸಿಕೊಂಡಿರುವ ಶ್ರೀಮಠಗಳು, ಸರ್ವ ಜಾತಿ ಜನಾಂಗದವರಿಗೂ ಆಶ್ರಯ ನೀಡಿ ಅನ್ನ, ಅಕ್ಷರ, ಜ್ಞಾನ ದಾಸೋಹದ ಮೂಲಕ ಬೆಳಕು ನೀಡುವ ಕಾರ್ಯ ಮಾಡಿ, ಭಾರತದ ಪ್ರತಿಭಾವಂತರು ಜಾಗತಿಕ ಮನ್ನಣೆ ಪಡೆಯುವಂತೆ ಮಾಡಿದ್ದಾರೆ ಎಂದು ಹೇಳಿದರು.
ಸಂಸ್ಕಾರದವಿಲ್ಲದ ವಿದ್ಯೆ ವ್ಯರ್ಥ : ತಂದೆ ತಾಯಿ ಗುರುಗಳಿಗೆ ಗೌರವ ನೀಡದೆ, ದೇಶವನ್ನು ಪ್ರೀತಿಸದವರು ಎಷ್ಟೇ ಪದವಿ ಪಡೆದಿದ್ದರೂ ಅದು ಶೂನ್ಯ. ಸಂಸ್ಕಾರದವಿಲ್ಲದ ವಿದ್ಯೆ ವ್ಯರ್ಥ. ಹೀಗಾಗಿ ತಂದೆ ತಾಯಿ ತಮ್ಮ ಮಕ್ಕಳಿಗೆ ಜೀವನಪಾಠ ಕಲಿಸುವ ವಚನಗಳನ್ನು ಕಲಿಸಬೇಕು, ಅದರ ಅರ್ಥ ತಿಳಿಸಬೇಕು. ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದರು.
ಬದುಕಿನಲ್ಲಿ ಎದುರಾಗುವ ಎಲ್ಲ ಸವಾಲುಗಳಿಗೆ ವಚನಗಳಲ್ಲಿ ಪರಿಹಾರವಿದೆ. ಭಾರತದಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಆದರೆ, ಪ್ರತಿಭಾವಂತರು ದೊಡ್ಡ ಕನಸು, ಗುರಿಗಳನ್ನು ಇಟ್ಟುಕೊಂಡು, ಸಾಧಿಸುವ ಛಲ ಬೆಳೆಸಿಕೊಂಡರೆ, ಭಾರತ ವಿಶ್ವದಲ್ಲೇ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.
ದುಶ್ಚಟದಿಂದ ದೂರವಿರಲು ಕರೆ: ತಂದೆ, ತಾಯಿ ಇಬ್ಬರೊಂದಾಗಿ ದುಡಿಯುತ್ತಿರುವ ಈ ಕಾಲದಲ್ಲಿ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಆಗುತ್ತಿಲ್ಲ. ಹೀಗಾಗಿ ಮಕ್ಕಳು ದುಶ್ಚಟಗಳ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪಾಲಕರು, ಶಿಕ್ಷಕರು ತಮ್ಮ ಮಕ್ಕಳು ದಾರಿತಪ್ಪದಂತೆ ಎಚ್ಚರವಹಿಸಬೇಕು. ಭವಿಷ್ಯದ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.
ಪ್ರಕೃತಿ ಪರಿಸರ ಉಳಿಸಲು ಕರೆ: ಪ್ರಕೃತಿ, ಪರಿಸರ ಉಳಿಸುವವರನ್ನು ಪ್ರಕೃತಿಯೂ ಉಳಿಸುತ್ತದೆ. ಫಲ, ನೆರಳು, ನೀಡುವ ವೃಕ್ಷಗಳು ಬದುಕಲು ಅತ್ಯಗತ್ಯವಾದ ಪ್ರಾಣವಾಯುವನ್ನೂ ನೀಡುತ್ತವೆ. ಹವಾಮಾನ ವೈಪರೀತ್ಯ, ತಾಪಮಾನ ಏರಿಕೆಗೆ ಹಸಿರು ನಾಶವೇ ಕಾರಣವಾಗಿದ್ದು, ವಿದ್ಯಾರ್ಥಿಗಳು ಪರಿಸರ ಪ್ರಜ್ಞೆ ಬೆಳೆಸಿಕೊಂಡು ಸಸಿನೆಟ್ಟು, ನೀರೆರೆದು ಪೋಷಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೆರೆಗೆ ಕಾಯಕಲ್ಪ: ನೆಲಮಂಗಲ ಕೆರೆಗೆ ತ್ಯಾಜ್ಯ ನೀರು ಹರಿಯುತ್ತಿದ್ದು, ದುರ್ನಾತ ಬೀರುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಕುರಿತಂತೆ ಮಾತನಾಡಿದ ಪರಿಸರ ಸಚಿವರು, ಕೆರೆಯ ಸ್ವಚ್ಛತೆಗೆ ಜಲ ಕಾಯಿದೆ ಅಡಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಮಾರಂಭದಲ್ಲಿ ಸಿದ್ಧಗಂಗಾಮಠಾಧೀಶರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜೀ, ಶಿವಂಗಂಗೆ ಮೇಲಣಗವಿಮಠದ ಶ್ರೀ ಪಟ್ಟದ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಹೊನ್ನಗವಿಮಠದ ಶ್ರೀ ರುದ್ರಮುನಿ ಶಿವಾಚಾರ್ಯಸ್ವಾಮೀಜಿ, ಪವಾಡಶ್ರೀ ಬಸವಣ್ಣದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮಹಾಸಭಾದ ನಿರ್ದೇಶಕ ಎನ್.ಎಸ್. ನಟರಾಜು ಮತ್ತಿತರರು ಪಾಲ್ಗೊಂಡಿದ್ದರು.