ಸುದ್ದಿಮೂಲ ವಾರ್ತೆ
ಕನಕಪುರ, ಜು.22: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕನಕಪುರದ ಕರ್ನಾಟಕ ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರಕ್ಕೆ ಶನಿವಾರ ದಿಢೀರ್ ಭೇಟಿ ಕೊಟ್ಟು ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆಯನ್ನು ಖುದ್ದು ಪರಿಶೀಲಿಸಿದರು.
ತಮ್ಮ ಹೆಸರು ನೋಂದಣಿ ಮಾಡಲು ಬಂದಿದ್ದ ಮಹಿಳೆಯರು ಮತ್ತು ಆ ಕೇಂದ್ರದ ಸಿಬ್ಬಂದಿ ಡಿಸಿಎಂ ಶಿವಕುಮಾರ್ ಅವರನ್ನು ಕಂಡು ಆಶ್ಚರ್ಯಚಕಿತರಾದರು.
ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆಯನ್ನು ಹೇಗೆ ಮಾಡಲಾಗುತ್ತಿದೆ? ಅಲ್ಲಿನ ಸಿಬ್ಬಂದಿ ಏನಾದರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರಾ? ವಿಳಂಬ ಮಾಡುತ್ತಿದ್ದಾರಾ? ಕುಂಟು ನೆಪ ಹೇಳುತ್ತಿದ್ದಾರಾ? ಮನೆ ಯಜಮಾನಿಯರಿಗೆ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಇದೆಯಾ? ನೋಂದಣಿ ಪ್ರಕ್ರಿಯೆ ಸರಳವಾಗಿದೆಯಾ ಎಂಬುದರ ಬಗ್ಗೆ ನೋಂದಣಿದಾರರಿಂದಲೇ ಖುದ್ದು ಮಾಹಿತಿ ಪಡೆದರು.
ಅಗತ್ಯ ದಾಖಲೆ ಸಲ್ಲಿಸಲು ತನಗಿರುವ ವೈಯಕ್ತಿಕ ತಾಂತ್ರಿಕ ತೊಡಕು ಬಗ್ಗೆ ಮಹಿಳೆಯೊಬ್ಬರು ನೀವೇದಿಸಿಕೊಂಡಾಗ ಅದಕ್ಕೆ ಪರಿಹಾರವನ್ನು ಡಿಸಿಎಂ ಅವರು ಸೂಚಿಸಿದರು. ಸಿಬ್ಬಂದಿ ಜತೆ ಕಂಪ್ಯೂಟರ್ ಮುಂದೆ ಕುಳಿತು ಪ್ರಕ್ರಿಯೆಯನ್ನು ಖುದ್ದು ಪರಿಶೀಲಿಸಿದರು. ಕೆಲವು ಮಹಿಳೆಯರಿಗೆ ನೋಂದಣಿ ಪತ್ರವನ್ನೂ ವಿತರಿಸಿದರು.