ಸುದ್ದಿಮೂಲ ವಾರ್ತೆ
ಬೆಂಗಳೂರು, ಜು 23 : ಕನ್ನಡ ಸಾಹಿತ್ಯದಲ್ಲಿ ಹೊಸ ಚಿಂತನೆ ಹಾಗೂ ಪರಿಕಲ್ಪನೆಯನ್ನು ಹುಟ್ಟು ಹಾಕಿದವರು ಸಾಹಿತಿ ಬರಗೂರು ರಾಮಚಂದ್ರಪ್ಪನವರು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನ ಅಂಕಿತ ಪುಸ್ತಕ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ‘ಕಾಗೆ ಕಾರುಣ್ಯದ ಕಣ್ಣು’ ಆಯ್ದ ಅನುಭವಗಳ ಕಥನ ಕೃತಿ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಬರಗೂರು ರಾಮಚಂದ್ರಪ್ಪ ಅವರು ಸಾಹಿತ್ಯ ಕ್ಷೇತ್ರ ಹೊರತು ಬೇರೆ ಯಾವುದಾದರೂ ಕ್ಷೇತ್ರಕ್ಕೆ ಕಾಲಿಟ್ಟಿದ್ದರೆ ನಮಗೆ ಇಂತಹ ಕೃತಿಗಳು ಸಿಗುತ್ತಿರಲಿಲ್ಲ. ಇವರ ಆತ್ಮಕಥೆ ಸಮಾಜಕ್ಕೆ ಬಹು ದೊಡ್ಡ ಕೊಡುಗೆಯಾಗಿದೆ. ವ್ಯಕ್ತಿಯ ಬದಲಾವಣೆಗೆ ರೂಪಕವಾಗಬಲ್ಲ ಅಂಶ ಹಾಗೂ ಚಿಂತನೆಗಳು ಲೇಖಕರಲಿದ್ದು ಅದನ್ನು ಜನತೆ ಓದಿಕೊಂಡರೆ ಅವರ ಬದುಕಿಗೂ ಉಪಕಾರಿಯಾಗಬಲ್ಲದು ಎಂದು ತಿಳಿಸಿದರು.
ವಿಮರ್ಶಕ, ಭಾಷಾ ವಿಜ್ಞಾನಿ ಕೆ.ವಿ. ನಾರಾಯಣ ಮಾತನಾಡಿ, ಬರಗೂರು ಅವರಲ್ಲಿ ಇಬ್ಬರು ಬರಗೂರು ರಾಮಚಂದ್ರಪ್ಪರಿದ್ದಾರೆ. ವೈಯುಕ್ತಿಕವಾದ ನೆಲೆಗಟ್ಟಿನಲ್ಲಿ ತಮ್ಮೊಳಗಡೆನೆ ತಾವಿರುವಂತಹ ಒಬ್ಬ ವ್ಯಕ್ತಿಯಾದರೆ, ಇನ್ನೊಂದು ಸಾಮಾಜಿಕ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯ ರೂಪ ಎಂದು ತಿಳಿಸಿದರು.
ಹಿರಿಯ ಲೇಖಕ ಬರಗೂರು ರಾಮಚಂದ್ರಪ್ಪ ಮಾತನಾಡಿ, ವಾಸ್ತವವಾಗಿ ಲೇಖಕನಾದವ ಮೆರವಣಿಗೆಯಲ್ಲಿಯೂ ಒಂಟಿಯಾಗಿ, ಸಂತೆಯಲ್ಲೂ ಸಂತನಾಗಿರುವುದನ್ನು ಕಲಿಯಬೇಕು. ಇನ್ನು ‘ಕಾಗೆ ಕಾರುಣ್ಯದ ಕಣ್ಣು’ ಕೃತಿಗೆ ಆ ಹೆಸರನ್ನಿಟ್ಟ ಕಾರಣ ಕಾಗೆ ಸೌಹರ್ದತೆ ಹಾಗೂ ಸಮುದಾಯದ ಪ್ರಜ್ಞೆಯನ್ನು ಎಚ್ಚರಿಸುತ್ತದೆ. ಅದರ ಬಳಗ, ಸಮುದಾಯ ಹಾಗೂ ಸೌಹರ್ದತೆ ಪಜ್ಞೆಯು ಇವತ್ತು ನಮ್ಮ ದೇಶಕ್ಕೂ ಬೇಕಾಗಿದೆ. ಅದು ಇದೆಯೇ ಎಂಬುವುದನ್ನು ನಾವು ಗಮನಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಜಯದೇದ ಹೃದ್ರೋಗ ಸಂಸ್ಥೆ ನಿರ್ದೇಶಕ ಸಿ.ಎನ್. ಮಂಜುನಾಥ್, ಈ ಪುಸ್ತಕದ ಸಂದೇಶವು ನಾವು ಹಂಚಿತಿನ್ನಬೇಕೆ ಹೊರತು, ಕಿತ್ತು ತಿನ್ನಬಾರದು. ಅಳಿಸಿದ್ದು ಕೊಡಬಾರದು, ಉಳಿಸಿದ್ದು ಕೊಡಬೇಕು ಎನ್ನುವುದನ್ನು ತಿಳಿಸುತ್ತದೆ ಎಂದರು.