ಸುದ್ದಿಮೂಲ ವಾರ್ತೆ
ಕುಷ್ಟಗಿ, ಜು.23:ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕೆಲದಿನಗಳಿಂದ ಸುರಿಯುತ್ತಿರುವ ನಿರಂತರ ಜಿಟಿ ಜಿಟಿ ಮಳೆಗೆ ರೈತರು ಬೀಜೋತ್ಪಾದನೆಗಾಗಿ ಬೆಳೆದ ಹತ್ತಿ ಬೆಳೆ ಹಾಳಾಗಿದೆ.
ತಾಲೂಕಿನಲ್ಲಿ ದೊಡ್ಡ ಮತ್ತು ಸಣ್ಣ ರೈತರು, ಬಿತ್ತನೆ ಮಾಡಿದ ಬೀಜ, ಮೊಳಕೆಯೊಡೆದು ಬೆಳವಣಿಗೆ ಕಂಡಿತ್ತು. ಹೂ-ಕಾಯಿ ಬಿಡುವ ಸಮಯದಲ್ಲಿ ಬಿಸಿಲಿಗೆ ಗಿಡದ ಬಡ್ಡಿ ಎಲೆಗಳು ಕೆಂಪು ಧರಿಸಿದೆ. ತಿಂಗಳ ಹಿಂದೆ ಬಂದ ಮಳೆ ಗಾಳಿಗೆ ಕೆಲ ಹತ್ತಿಗಿಡಗಳು ನೆಲ ಕಚ್ಚಿದ್ದವು. ಇದರಿಂದ ರೈತರು ಆತಂಕಕ್ಕೊಳಗಾಗಿದ್ದರು. ಆಗ ಬೆಳೆ ಮತ್ತೆ ಚೇತರಿಕೆ ಕಂಡು ಉತ್ತಮ ಫಸಲು ಪಡೆಯವ ತವಕದಲ್ಲಿರುವಾಗ ಕಳೆದೊಂದು ವಾರದಿಂದ ಸುರಿಯುತ್ತಿರುವ ನಿರಂತರ ಜಿಟಿ ಜಿಟಿ ಮಳೆಗೆ ಗಿಡಗಳಲ್ಲಿನ ಕಾಯಿಗಳು ಕೊಳೆಯಲಾರಂಭಿಸಿವೆ.
ಲಕ್ಷಾಂತರ ರೂಪಾಯಿ ಸಾಲ-ಸೋಲ ಮಾಡಿ ಆರಂಭದಿಂದ ರಸಗೊಬ್ಬರ ಹಾಗೂ ಕ್ರಿಮಿನಾಶಕ ಬಳಸಿರುವ ರೈತರು ತಲೇಮೇಲೆ ಕೈಹೊತ್ತು ಕುಳಿತ್ತಿದ್ದಾರೆ. ಅತಿವೃಷ್ಟಿ ಅನಾವೃಷ್ಟಿಯಿಂದ ಬೆಳೆ ಹಾಳಾಗಿದ್ದು ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಅಂಗಲಾಚುತ್ತಿದ್ದಾರೆ.
ಕುಷ್ಟಗಿ ಪಟ್ಟಣದ ಹೊರವಲಯ ಟೆಂಗುಂಟಿ ರಸ್ತೆ ಬಳಿ ಇರುವ ಮಲ್ಲಪ್ಪ ಗೌಡರ್ ಲಕ್ಷ್ಮೇಶ್ವರ ಎಂಬುವರಿಗೆ ಸೇರಿದ 2 ಎಕರೆ ಜಮೀನಿನಲ್ಲಿ ರೈತ ಮಲ್ಲೇಶಪ್ಪ ಕರಡೆಪ್ಪನವರು ಸುಮಾರು 2 ಲಕ್ಷ ರೂ.ಗಳ ವ್ಯಯಿಸಿ ಬೀಜೋತ್ಪಾದನೆಗಾಗಿ ಹತ್ತಿ ಬೆಳೆದಿದ್ದು, ನಿರಂತರ ಜಿಟಿ ಜಿಟಿ ಮಳೆಗೆ ಕಾಯಿ ಕೊಳೆಯಲಾರಂಭಿಸಿದೆ.
ಅದೇರೀತಿ ತಾವರಗೇರಾ ರಸ್ತೆ ಹಾಲಿನ ಕೇಂದ್ರದ ಬಳಿ ಇರುವ ಸಿದ್ಧಲಿಂಗಯ್ಯ ಹಿರೇಮಠ ಎಂಬುವರಿಗೆ ಸೇರಿದ 2 ಎಕರೆ ಜಮೀನಿನಲ್ಲಿ ರೈತ ಹನುಮಂತಪ್ಪ ನೆರೆಬೆಂಚಿ ಬೆಳೆದ ಹತ್ತಿ ಗಿಡದಲ್ಲಿನ ಕಾಯಿಲೆಗಳು ಬಿಸಿಲಿನ ತಾಪಕ್ಕೆ ಕೆಂಪು ಬಣ್ಣಕ್ಕೆ ತಿರುಗಿತ್ತು. ಇತ್ತೀಚೆಗೆ ಸುರಿಯುತ್ತಿರುವ ಮಳೆಗೆ ಕಾಯಿ ಕೊಳೆತು ಹಾಳಾಗುತ್ತದೆ.
ಇದೇ ಜಮೀನಿನ ಪಕ್ಕದಲ್ಲಿ ನಾಗಬಸಪ್ಪ ಕಂದಗಲ್ ಹಾಗೂ ನೀಲಕಂಠಪ್ಪ ಕಂದಗಲ್ ಎಂಬುವರಿಗೆ ಸೇರಿದ 3 ಎಕರೆ ಜಮೀನಿನಲ್ಲಿ ರೈತ ಮಂಜುನಾಥ ಎಂಬುವರು ಬೆಳೆದ ಹತ್ತಿ ಮಳೆಯ ಹೊಡೆತಕ್ಕೆ ಕಾಯಿ ಕೊಳೆಯಲಾರಂಭಿಸಿರುವ ಕುರಿತು ಅಳಲು ತೋಡಿಕೊಂಡರು.
ಒಟ್ಟಾರೆ, ಸಾಲಸೋಲ ಮಾಡಿ ಹತ್ತಿ ಬೆಳೆದು ಬಾಳು ಹಸನು ಮಾಡಿಕೊಳ್ಳಬೇಕೆಂಬ ಕಂಡಿದ್ದ ರೈತರ ಕನಸಿಗೆ ಹವಾಮಾನ ವೈಪರೀತ್ಯ ತಣ್ಣೀರೆರೆಚಿದೆ. ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನಿಸಿ ಸರ್ಕಾರದಿಂದ ಪರಿಹಾರದ ನೆರವು ಕೊಡಿಸಬೇಕಿದೆ.