ಬೆಂಗಳೂರು: ವಿಜ್ಞಾನ ಮತ್ತು ಸಂಶೋಧನೆ ಹಾಗೂ ನಾವೀನ್ಯತೆ ವಿಷಯದಲ್ಲಿ ರಾಜ್ಯದ ಜತೆ ಕೆಲಸ ಮಾಡಲು, ಸ್ವಿಟ್ಜರ್ಲೆಂಡ್ ಆಸಕ್ತಿ ವ್ಯಕ್ತಪಡಿಸಿದ್ದು, ಈ ಸಂಬಂಧವಾಗಿ ಆ ದೇಶದ ಕಾನ್ಸುಲ್ ಜನರಲ್ ಜೋನಾಸ್ ಬ್ರನ್ಶ್ವಿಗ್ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರೊಂದಿಗೆ ಸೋಮವಾರ ಇಲ್ಲಿ ವಿಸ್ತೃತ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ರನ್ಶ್ವಿಗ್ ಅವರು, “ಸ್ವಿಟ್ಜರ್ಲೆಂಡ್ ಮತ್ತು ಕರ್ನಾಟಕದ ನಡುವೆ ಇರುವ ಸಹಭಾಗಿತ್ವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಇಂಡೋ-ಸ್ವಿಸ್ ಇನ್ನೋವೇಶನ್ ಪ್ಲಾಟ್ಫಾರಂ ಎನ್ನುವ ಸಾಂಸ್ಥಿಕ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ. ಬೆಂಗಳೂರಿನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕಲ್ ಸೈನ್ಸಸ್(ಎನ್ಸಿಬಿಎಸ್)ನಲ್ಲಿ ಮೂರು ದಿನಗಳ ಸಮಾವೇಶ ನಡೆಸುವ ಮೂಲಕ ಈ ವೇದಿಕೆಗೆ ಚಾಲನೆ ನೀಡಲಾಗುವುದು. ಇದರಲ್ಲಿ ಭಾರತ ಮತ್ತು ಸ್ವಿಸ್ಗಳ ತಲಾ 25 ಪರಿಣತರು ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
ಕರ್ನಾಟಕದಲ್ಲಿ ಸ್ವಿಟ್ಜರ್ಲೆಂಡ್ನ 49 ಕಂಪನಿಗಳು ಸಕ್ರಿಯವಾಗಿದ್ದು, 17,800 ಉದ್ಯೋಗಾವಕಾಶ ಸೃಷ್ಟಿಸಿವೆ. ಇದರ ಪೈಕಿ ಸರಿಸುಮಾರು 40 ಕಂಪನಿಗಳು ರಾಜ್ಯದಲ್ಲಿ ತಯಾರಿಕಾ ಘಟಕಗಳನ್ನು ಹೊಂದಿವೆ. ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳಲಿರುವ ಸಮಾವೇಶದಲ್ಲಿ ಆಂಟಿಮೈಕ್ರೋಬಯಲ್ ರೆಸಿಸ್ಟೆನ್ಸ್ (ಎಎಂಆರ್) ಕುರಿತು ಹೆಚ್ಚಿನ ಗಮನ ಹರಿಸುವುದು ಮುಖ್ಯ ಉದ್ದೇಶವಾಗಿದೆ. ಇದು ಅಂತಿಮವಾಗಿ ಶಿಕ್ಷಣ ಕ್ಷೇತ್ರ ಮತ್ತು ಉದ್ಯಮದ ನಡುವಿನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸಲು ನೆರವಾಗಲಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕಳೆದ 30 ವರ್ಷಗಳಿಂದ ಹಲವು ಸ್ವಿಸ್ ಉದ್ದಿಮೆಗಳಿವೆ. ಒಟ್ಟಾರೆಯಾಗಿ ತಮ್ಮ ದೇಶದ ಕಂಪನಿಗಳು ಭಾರತದಲ್ಲಿ ಹೂಡುತ್ತಿರುವ ಬಂಡವಾಳ ಪ್ರಮಾಣವು 2015ರಿಂದ 2022ರ ನಡುವೆ ಶೇಕಡ 53ರಷ್ಟು ಏರಿಕೆ ಕಂಡಿದೆ. ಹಾಗೆಯೇ ಭಾರತದ ಕಂಪನಿಗಳು ಸ್ವಿಸ್ನಲ್ಲಿ ಹೂಡುತ್ತಿರುವ ಬಂಡವಾಳದಲ್ಲೂ ಕಳೆದ ಏಳು ವರ್ಷಗಳಲ್ಲಿ ಶೇಕಡ 9ರಷ್ಟು ಬೆಳವಣಿಗೆ ಕಂಡುಬಂದಿದೆ ಎಂದು ಅವರು ವಿವರಿಸಿದರು.
ಇದಕ್ಕೆ ಸ್ಪಂದಿಸಿ ಮಾತನಾಡಿದ ಸಚಿವರು, “ಭಾರತ ಒಂದು ಬೃಹತ್ ರಾಷ್ಟ್ರವಾಗಿದ್ದು, ಇಲ್ಲೂ ರಚನಾತ್ಮಕ ಪರಿವರ್ತನೆಗಳು ಕಾಣಿಸುತ್ತಿವೆ. ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಮಂದಿರದಂತಹ ಹತ್ತಾರು ಅತ್ಯುತ್ತಮ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿದ್ದು, ಸ್ವಿಸ್ ಕಂಪನಿಗಳು ಇವುಗಳ ಜತೆಗೂಡಿ ಅಧ್ಯಯನ ಮತ್ತು ಸಹಭಾಗಿತ್ವ ನಡೆಸಬೇಕು. ಇದಕ್ಕೆ ಸರಕಾರವು ಮುಕ್ತ ಅವಕಾಶ ನೀಡಲಿದೆ” ಎಂದರು.
ಡಿಕಾರ್ಬನೈಸೇಷನ್, ಪರಿಸರಸ್ನೇಹಿ ಇಂಧನ ಇವೆಲ್ಲವೂ ಇಲ್ಲಿ ನಡೆಯಬೇಕಿದೆ. ಇದಕ್ಕಾಗಿ ಎಲ್ಲೆಡೆ ಹಸಿರು ಕವಚವನ್ನು ಸೃಷ್ಟಿಸಬೇಕು. ಇಂತಹ ಆಸಕ್ತಿ ಸಾರ್ವಜನಿಕರಲ್ಲೂ ಹುಟ್ಟಬೇಕು. ಮಂಗಳೂರಿನಲ್ಲಿ ಹಸಿರು ಇಂಧನ ಉತ್ಪಾದಿಸಲು ಸರಕಾರ ಮುಂದಡಿ ಇಟ್ಟಿದ್ದು, ಅಪಾರ ಪ್ರಮಾಣದ ಹೂಡಿಕೆ ಹರಿದು ಬರುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅವರು, ತಮ್ಮ ಸ್ವಂತ ಜಿಲ್ಲೆಯಾದ ವಿಜಯಪುರದಲ್ಲಿ ತಾವು ಸ್ವಯಂ ಆಸಕ್ತಿಯಿಂದ 1.5 ಕೋಟಿ ಸಸಿ ನೆಟ್ಟಿರುವ ಕೋಟಿ ವೃಕ್ಷ ಅಭಿಯಾನದ ವಿಡಿಯೋ ತುಣಕನ್ನು ಸ್ವಿಸ್ ಕಾನ್ಸುಲ್ ಜನರಲ್ಗೆ ತೋರಿಸಿದರು.
ಮಾತುಕತೆಯ ವೇಳೆ ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಉದ್ಯೋಗ ಮಿತ್ರದ ಸಿಇಒ ದೊಡ್ಡ ಬಸವರಾಜ ಉಪಸ್ಥಿತರಿದ್ದರು.
ಕ್ಯಾಪ್ಶನ್
ಸ್ವಿಟ್ಜರ್ಲೆಂಡ್ ಕಾನ್ಸುಲ್ ಜನರಲ್ ಜೋನಾಸ್ ಬ್ರನ್ಶ್ವಿಗ್ ಅವರು ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಅವರನ್ನು ಸೋಮವಾರದಂದು ಬೆಂಗಳೂರಿನಲ್ಲಿ ಭೇಟಿ ಮಾಡಿ, ಮಾತುಕತೆ ನಡೆಸಿದರು.