ಸುದ್ದಿಮೂಲ ವಾರ್ತೆ
ಹುಣಸೂರು, ಜು.24 : ಮಣಿಪುರದಲ್ಲಿ ನಡೆದಿರುವ ಮಹಿಳೆಯರ ಬೆತ್ತಲೆ ಮೆರವಣಿಗೆ ಹಾಗೂ ಸಾಮೂಹಿಕ ಅತ್ಯಾಚಾರಗೈದಿರುವ ಅಮಾನವೀಯ ಕೃತ್ಯವನ್ನು ಖಂಡಿಸಿ, ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಹಾಗೂ ಪ್ರಗತಿಪರ ಸಂಘಟನೆಗಳು ಸೇರಿ ಹುಣಸೂರು ಪಟ್ಟಣದ ಸಂವಿಧಾನ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು.
ಮೂವ್ ಮೆಂಟ್ ಅಧ್ಯಕ್ಷ ಮುದ ಮುದಾಸಿರ್ ಖಾನ್ ಮಾತನಾಡಿ, ಕಳೆದ ಮೂರು ತಿಂಗಳಿಂದಲೂ ಮಣಿಪುರ ಜನಾಂಗೀಯ ದ್ವೇಷದ ದಳ್ಳುರಿಯಲ್ಲಿ ಬೇಯುತ್ತಿದೆ. ಅಲ್ಲಿನ ಕುಕಿ ಬುಡಕಟ್ಟು ಸಮುದಾಯದ ಮೂವರು ಮಹಿಳೆಯರನ್ನು ಬೆತ್ತಲೆಗೊಳಿಸಿ ,ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಅಮಾನವೀಯ. ಇಡೀ ಮನುಕುಲವೇ ತಲೆ ತಗ್ಗಿಸುವ ಕೃತ್ಯವಿದು ಎಂದು ಖಂಡಿಸಿದರು.
ಸೌಹಾರ್ದ ಕರ್ನಾಟಕ ವೇದಿಕೆ ಅಧ್ಯಕ್ಷ ಜೆ ಮಹದೇವ ಅವರು ಮಾತನಾಡಿ, ಮಣಿಪುರದಲ್ಲಿ ನಡೆದಿರುವ ಘಟನೆಗೆ ಇಡೀ ಭಾರತವೇ ತಲೆ ತಗ್ಗಿಸುವಂತಾಗಿದೆ. ಜನಾಂಗೀಯ ದ್ವೇಷದ ಬೆಂಕಿ ಹತ್ತಿಸಿದಾಗ ಅದು ಜ್ವಲಿಸುವ ಹಿಂಸೆಯ ಆತ್ಯಂತಿಕ ಸ್ವರೂಪವೇ ಮಹಿಳೆಯರ ಮೇಲಿನ ಅತ್ಯಾಚಾರ. ಹೆಣ್ಣೊಬ್ಬಳು ಜನಾಂಗೀಯ ಪ್ರತಿನಿಧಿಯಾಗಿ ಕಾಣುವ ವಿಕೃತಿ ಮಣಿಪುರದಲ್ಲಿ ನಿರಂತರ ಜನಾಂಗೀಯ ಹಿಂಸಾಚಾರ ತಡೆಯಲು ಕೂಡಲೇ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮೂವ್ ಮೆಂಟ್ ನ ರಾಶಿದ್, ಪಬ್ಲಿಕ್ ಪೀಸ್ ಕಮಿಟಿಯ ಶಾಮುನ್ನಾ, ಮುಜಾಮಿಲ್ , ಜಬ್ಬಾರ್, ಹಾಗೂ ಜಮಾತ್ ಇಸ್ಲಾಂನ ಅಜೀಜುಲ್ಲಾ , ಮುಸ್ತಫಾ , ಅಬ್ಬಾಸ್ , ಹೂಮನ್ ಹೆಲ್ಪ್ ಪೌಂಡೇಶನ್ನ ರಿಜ್ವಾನ್ ದಸಂಸ ದ ಸಂಚಾಲಕರಾದ ರಾಮಕೃಷ್ಣ ಅತ್ತಿಗುಪ್ಪೆ , ಚಿಕ್ಕ ಹುಣಸೂರು ರಾಜು . ಅಲ್ಪಸಂಖ್ಯಾತ ಮುಖಂಡರಾದ ಮೊಯಿದ್ದೀನ್ ,ಜಬ್ಬಾರ್, ಅಬ್ಬಾಸ್ , ಮತ್ತು ಮಹಿಳಾ ಮುಖಂಡರಾದ ಉವೇ ಸಲ್ಮಾ, ಜಸೀಲಾ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.