ಹೊಸಕೋಟೆ, ಜು 24 : ರಾಜ್ಯದ ಕೆಲ ಕೇಂದ್ರಗಳಲ್ಲಿ ಸದ್ದು ಮಾಡಿದ ಕೊಳೆತ ಮೊಟ್ಟೆ ಅಂಗನವಾಡಿ ಕೇಂದ್ರಗಳಲ್ಲೂ ಬರತೊಡಗಿದೆ. ಕೇಂದ್ರಗಳಿಗೆ ಪೂರೈಕೆಯಾದ ಮೊಟ್ಟೆಗಳಿಂದ ನಾಲೈದು ದಿನಗಳಲ್ಲೇ ಕೊಳೆತ ವಾಸನೆ ಬರುತ್ತಿದ್ದು, ಇದರಿಂದಾಗಿ ಮಕ್ಕಳು, ಬಾಣಂತಿಯರು ಮೊಟ್ಟೆಗಳನ್ನು ಸೇವಿಸಲು ಹಾಕುತ್ತಿದ್ದಾರೆ.
ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ ಹೊರತುಪಡಿಸಿ ಇನ್ನುಳಿದ ಹೊಸಕೋಟೆ ಮತ್ತು ನೆಲಮಂಗಲ ತಾಲೂಕುಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಟೆಂಡರ್ದಾರರು ಮೊಟ್ಟೆಗಳನ್ನು ಪೂರೈಕೆ ಮಾಡುತ್ತಿದ್ದು, ಪೂರೈಕೆಯಾದ ನಾಲ್ಕೈದು ದಿನಗಳಿಗೆ ಮೊಟ್ಟೆಗಳಿಂದ ಕೊಳೆತ ವಾಸನೆ ಬರುತ್ತಿದೆ . ಅಲ್ಲದೆ ಮೊಟ್ಟೆ ಸುತ್ತಲು ಹುಳುಗಳು ಕಾಣಿಸಿಕೊಳ್ಳುತ್ತಿವೆ. ಮೊಟ್ಟೆಯ ಕ್ರೇಟ್ ನಲ್ಲಿ ಎಲ್ಲ ಮೊಟ್ಟೆಗಳಲ್ಲೂ ಈ ರೀತಿ ಇಲ್ಲದಿದ್ದರೂ ಒಂದೊಂದು ಕ್ರೇಟ್ ನಲ್ಲಿ ನಾಲ್ಕೈದು ಮೊಟ್ಟೆಗಳು ಈ ರೀತಿ ವಾಸನೆ ಬಂದಿದ್ದು , ಮೊಟ್ಟೆಗಳನ್ನು ಫಲಾನುಭವಿಗಳು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಈ ಮೊಟ್ಟೆಗಳನ್ನು ಮಕ್ಕಳಿಗೆ ಬೇಯಿಸಲು ಇಡುವಾಗ ವಿಪರೀತ ವಾಸನೆ ಹೊರ ಬರುತ್ತಿದ್ದು, ಇಂಥ ಮೊಟ್ಟೆಗಳನ್ನು ಮಕ್ಕಳಿಗೆ ನೀಡಬೇಡಿ ಎಂದು ಪೋಷಕರು ಹೇಳಿದರೆ, ಗರ್ಭೀಣಿಯರು ಇಂಥ ಮೊಟ್ಟೆಗಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ʼಸುದ್ದಿಮೂಲʼ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ .
ರಬ್ಬರ್ ನಂತೆ ಇರುತ್ತದೆ : ಮೊಟ್ಟೆಗಳನ್ನು ಬೇಯಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಗಟ್ಟಿಯಂತೆ ಕಾಣುತ್ತವೆ . ಅವುಗಳನ್ನು ತಿನ್ನುವಾಗ ಪ್ಲಾಸ್ಟಿಕ್ ನಂತೆ ಹಿಗ್ಗುತ್ತಿವೆ . ಬೇಗ ಅಗೆಯಲು ಆಗುವುದಿಲ್ಲ. ಎಷ್ಟೋ ತ್ತಾದರೂ ಅಗಿಯುತ್ತಲೇ ಇರಬೇಕು . ಮೊಟ್ಟೆ ಮೇಲ್ಬಾಗದಲ್ಲಿ ಸೀಳುವ ಮಾದರಿಯಲ್ಲಿ ಕೆಲವೊಂದು ಮೊಟ್ಟೆಗಳು ಕ್ರೇಟ್ ನಲ್ಲಿ ಬರುತ್ತಿವೆ. ಮಾಮೂಲಿ ಮೊಟ್ಟೆಗಳಲ್ಲಿ ಮೊಟ್ಟೆ ಒಡೆದ ತಕ್ಷಣವೇ ಅದರಿಂದ ನೀರಿನಾಂಶದ ರಸ ಹೊರ ಬರುವುದು ಸಾಮಾನ್ಯ .ಆದರೆ ಈ ಮೊಟ್ಟೆಗಳಲ್ಲಿ ಸೀಳು ಭಾಗ ಕಂಡರೂ ಅದರಿಂದ ಯಾವುದೇ ನೀರಿನಾಂಶ ಹೊರಬರುವುದಿಲ್ಲ , ಕೆಲವೊಂದು ಮೊಟ್ಟೆಗಳನ್ನು ಅಲುಗಾಡಿಸಿದಾಗ ಅದರೊಳಗೆ ಏನು ಇಲ್ಲದಂತೆ ಕಂಡು ಬರುತ್ತಿದೆ ಎಂದರು.
ಜಾಸ್ತಿ ದಿನ ಇಡಬೇಡಿ, ಕೊಟ್ಟುಬಿಡಿ:
ಕೇಂದ್ರಗಳಿಗೆ ಮೊಟ್ಟೆಗಳನ್ನು ಪೂರೈಕೆ ಮಾಡುತ್ತಿರುವ ವ್ಯಕ್ತಿಗಳಿಗೆ ಮೊಟ್ಟೆ ಗಳಲ್ಲಿ ಕಂಡು ಬರುತ್ತಿರುವ ವಾಸನೆ ಬಗ್ಗೆ ತಿಳಿಸಿದರೆ, ನೀವು ಇದನ್ನು ಜಾಸ್ತಿ ದಿನ ಕೇಂದ್ರದಲ್ಲಿ ಇಟ್ಟುಕೊಳ್ಳಬೇಡಿ. ಪೂರೈಕೆ ಯಾದ ನಾಲ್ಕೈದು ದಿನಗಳ ಒಳಗೆ ಕೊಟ್ಟು ಬಿಡಿ ಎಂಬ ಮಾತನ್ನು ಪೂರೈಕೆದಾರರು ಹೇಳುತ್ತಿರುವುದಾಗಿ ತಿಳಿದು ಬಂದಿದೆ .
ತಿಂಗಳಾದರು ವಾಸನೆ ಬರುತ್ತಿರಲಿಲ್ಲ : ಈ ಮೊದಲು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಹಾಗೂ ಗರ್ಭೀಣಿಯರಿಗೆ ಕೇಂದ್ರದ ಕಾರ್ಯಕರ್ತರೇ ಸ್ಥಳೀಯ ಅಂಗಡಿಗಳಿಂದ ಖರೀದಿಸಿ ವಿತರಿಸುವ ವ್ಯವಸ್ಥೆಯಿತ್ತು. ಇದರಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಕೇಂದ್ರಗಳಿಗೆ ಟೆಂಡರ್ ಮೂಲಕ ಮೊಟ್ಟೆಗಳ ಪೂರೈಕೆ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು . ಕೇಂದ್ರದ ಕಾರ್ಯಕರ್ತರು ಸ್ಥಳೀಯವಾಗಿ ಖರೀದಿಸಿದ ಮೊಟ್ಟೆಗಳು ತಿಂಗಳು ಕಾಲ ಇಟ್ಟರೂ ಏನು ಆಗುತ್ತಿರಲಿಲ್ಲ . ಈ ಮೊಟ್ಟೆಗಳು ಕೇಂದ್ರಕ್ಕೆ ಸರಬರಾಜಾದ ನಾಲ್ಕೈದು ದಿನಗಳಿಗೆ ವಾಸನೆ ಬರುತ್ತಿದೆ ಯಾಕೆ ? ಎಂಬ ಪ್ರಶ್ನೆ ಕಾರ್ಯಕರ್ತರನ್ನು ಕಾಡುತ್ತಿದೆ.
ಈ ಬಗ್ಗೆ ಬಂದ ದೂರುಗಳನ್ನು ಆಧರಿಸಿ ಕೆಲ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಮೊಟ್ಟೆಗಳ ಸರಬರಾಜಿನಲ್ಲಿ ಕಳಪೆ ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.