ಸುದ್ದಿಮೂಲ ವಾರ್ತೆ
ಮಾಲೂರು, ಜು 24 : ನಂದಿನಿ ಹಾಲಿನ ಉತ್ಪಾದನೆ ರಾಜ್ಯದಲ್ಲಿ ಕಡಿಮೆಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 9 ಲಕ್ಷ ಲೀಟರ್ ಹಾಲು ಉತ್ಪಾದನೆ ಕುಂಠಿತಗೊಂಡಿದೆ. ಹಾಗಾಗಿ ಹಾಲು ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಅವರು 3 ರೂಪಾಯಿ ಏರಿಕೆ ಮಾಡಲಿದ್ದಾರೆ. ಆ ಹಣವನ್ನು ನೇರವಾಗಿ ಹಾಲು ಉತ್ಪಾದಕರಿಗೆ ನೀಡಲಾಗುತ್ತದೆ ಎಂದು ಕೋಚಿಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ ನಂಜೇಗೌಡ ಸ್ಪಷ್ಟಪಡಿಸಿದರು.
ತಾಲ್ಲೂಕಿನ ಶಾಸಕರ ನಿವಾಸ ಕೊಮ್ಮನಹಳ್ಳಿ ಯಲ್ಲಿ ಮಾತನಾಡಿದ ಅವರು, ಒಂದು ಲೀಟರ್ ನಂದಿನಿ ಹಾಲನ್ನು 39 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಹೊರ ರಾಜ್ಯಗಳ ಹಾಲು
ನಂದಿನಿ ಹಾಲಿಗಿಂತ 8 ರಿಂದ 10 ರೂಪಾಯಿ ಹೆಚ್ಚಿಗೆ ಮಾರಾಟ ಮಾಡುತ್ತಿದ್ದಾರೆ. ಗುಜರಾತ್ ಮೂಲದ ಅಮೂಲ್ ಹಾಲನ್ನು ನಂದಿನಿಗಿಂತ 10 ರೂಪಾಯಿ ಹೆಚ್ಚಿಗೆ ಮಾರಾಟ ಮಾಡಲಾಗ್ತಿದೆ. ಅದನ್ನು ಏಕೆ ವಿರೋಧ ಪಕ್ಷಗಳು ಕೇಳುವುದಿಲ್ಲ ಎಂದು ಪ್ರಶ್ನಿಸಿದರು. ಮೂರು ರೂಪಾಯಿ ಹೆಚ್ಚಳ ಮಾಡಿ ಅದನ್ನು ನೇರವಾಗಿ ಹಾಲು ಉತ್ಪಾದಕರಿಗೆ ಕೊಡಲಾಗುತ್ತಿದೆ ಎಂದರು.
ಹಾಲಿನ ಬೆಲೆ ಹೆಚ್ಚಳ ಮಾಡಿದ ತಕ್ಷಣ ಫೀಡ್ ರೇಟ್ ಹಾಗೂ ಹಿಂಡಿ, ಬೂಸ ಬೆಲೆಯೂ ಹೆಚ್ಚಾಗುತ್ತದೆ. ಇದು ಮತ್ತೆ ಹಾಲು ಉತ್ಪಾದಕರ ಮೇಲೆಯೇ ಹೊರೆ ಬೀಳುತ್ತದೆ. ಫೀಡ್ ಬೆಲೆಯನ್ನು ನಿಯಂತ್ರಣ
ಮಾಡುವುದು ಕೆಎಂಎಫ್. ಹೆಚ್ಚಳ ಮಾಡದಂತೆ ಸೂಚಿಸಲಾಗುವುದು. ಇನ್ನು ಪಶು ವೈದ್ಯರು ಮಾಹಿತಿ ನೀಡಿರುವ ಪ್ರಕಾರ ಹಿಂಡಿ, ಬೂಸ ಹಾಕುವುದರಿಂದ ಹಾಲು ಹೆಚ್ಚಾಗಿ ಬರುವುದಿಲ್ಲ. ಆದರೆ ಬೆಲೆ ಹೆಚ್ಚಳ ಮಾಡುವ ಮೂಲಕ ಖಾಸಗಿಯವರ ಹಾವಳಿ ಹೆಚ್ಚಾಗಿದೆ. ಹಾಲು ಉತ್ಪಾದಕರಿಗೆ ಹೊರೆಯಾಗದಂತೆ ಬೆಲೆ ಹೆಚ್ಚಳದ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು.