ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.24: ದಲಿತೋದ್ಧಾರಕ ಎನ್ನುವ ಕಾಂಗ್ರೆಸ್ಸಿಗರು ಬಿಜೆಪಿ ಜಾರಿಗೊಳಿಸಿದ 14 ಕಾರ್ಯಕ್ರಮಗಳನ್ನು ಸಿದ್ದರಾಮಯ್ಯ ಕೈಬಿಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೂತನ ಶಿಕ್ಷಣ ನೀತಿ ರದ್ದು ಮಾಡಿದ್ದಾರೆ. ಪಠ್ಯ ಪರಿಷ್ಕರಿಸಿದ್ದಾರೆ. ರೈತರು ಮತ್ತಿತರರಿಗೆ ಜಾರಿ ಮಾಡಿದ್ದ ವಿದ್ಯಾನಿಧಿ ನಿಲ್ಲಿಸಿದ್ದಾರೆ. ಪ್ರತಿಯೊಂದು ಜಿಲ್ಲೆಗೆ ಗೋಶಾಲೆ ಕಟ್ಟುವ ಯೋಜನೆಯನ್ನು ಕೈಬಿಟ್ಟಿದ್ದಾರೆ. ರೈತಪರ ಎಪಿಎಂಸಿ ಕಾಯ್ದೆ ಬದಲಿಸಿದ್ದಾರೆ ಎಂದು ಟೀಕಿಸಿದರು.
ರೈತರಲ್ಲದವರು ಕೃಷಿ ಭೂಮಿ ಖರೀದಿಗೆ ಅವಕಾಶ ಕೊಟ್ಟಿದ್ದು, ಅದನ್ನು ಕೈಬಿಟ್ಟಿದ್ದಾರೆ. ‘ನಮ್ಮ ಕ್ಲಿನಿಕ್’ ಕೈಬಿಟ್ಟಿದ್ದಾರೆ. ಶಾಲೆಗಳಿಗೆ ಒಂದೇ ರೀತಿಯ ಬಣ್ಣವನ್ನು ಕೈಬಿಟ್ಟಿದ್ದಾರೆ. ಯುವಶಕ್ತಿ, ಸ್ತ್ರೀಸಾಮಥ್ರ್ಯ ಯೋಜನೆಗಳನ್ನು ಕೈಬಿಟ್ಟಿದ್ದಾರೆ ಎಂದು ಟೀಕಿಸಿದರು.
ರೈತ ಸಮ್ಮಾನ್ ಯೋಜನೆಯ ರಾಜ್ಯದ ಕೊಡುಗೆ 4 ಸಾವಿರವನ್ನು ಕೈಬಿಟ್ಟಿದ್ದಾರೆ. ಕೃಷಿಕ ಮಹಿಳೆಯರಿಗೆ ಮಾಸಿಕ 500 ರೂ. ಕೊಡುವ ಶ್ರಮಶಕ್ತಿಯನ್ನು ಕೈಬಿಟ್ಟಿದ್ದಾರೆ. ಅಗ್ನಿವೀರರಾಗಲು ಎಸ್ಸಿ, ಎಸ್ಟಿ ಯುವಕರಿಗೆ ತರಬೇತಿಯನ್ನು ರದ್ದು ಮಾಡಿದ್ದಾರೆ. ಅಂತರ್ಜಲ ಹೆಚ್ಚಿಸುವ ಜಲನಿಧಿ ಯೋಜನೆ, ಹಾಲು ಉತ್ಪಾದಕರ ಬ್ಯಾಂಕ್ ರದ್ದು, ವಿನಯ ಸಾಮರಸ್ಯ ಸ್ಕೀಂ ಕೈಬಿಟ್ಟಿದ್ದಾರೆ ಎಂದು ಆಕ್ಷೇಪಿಸಿದರು.
ಸಿದ್ದರಾಮಯ್ಯರ ಬಜೆಟ್ ಮೂಗಿಗೆ ತುಪ್ಪ ಸವರುವ ರೀತಿಯಲ್ಲಿದೆ ಎಂದ ಛಲವಾದಿ ನಾರಾಯಣಸ್ವಾಮಿ ಅವರು, ಅವರು 1995-2000, 2013ರಿಂದ 18ರವರೆಗೆ ಬಜೆಟ್ ಮಂಡಿಸಿದ್ದರು. ಅವನ್ನು ಅವಲೋಕನ ಮಾಡಿದಾಗ ಅವರು ಮಂಡಿಸಿದ ಬಜೆಟ್ಗಳ ಸ್ಥಿತಿಗತಿ ಅರ್ಥವಾಗುತ್ತದೆ. 2000ವರೆಗಿನ 5 ವರ್ಷಗಳಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಮಿಗತೆಯಿಂದ ಆರ್ಥಿಕ ದುಸ್ಥಿತಿ ಕಡೆ ನಡೆಯಿತು ಎಂದು ವಿವರಿಸಿದರು.
ಹರಿಪ್ರಸಾದ್ ಹೇಳಿಕೆ ಮೂಲಕ ಸ್ಪಷ್ಟ ಸಂದೇಶ
ಬೆಂಗಳೂರು, ಜು.24: ಸಂಸತ್ ಚುನಾವಣೆ ಆಗುವವರೆಗೆ ಮಾತ್ರ ಸಿದ್ದರಾಮಯ್ಯರವರು ಸಿಎಂ ಆಗಿರಲಿದ್ದಾರೆ ಎಂದಿತ್ತು. ಅದನ್ನು ತಪ್ಪಿಸಲು 5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ತಿಳಿಸಲು ಅವರು ಇತರರನ್ನು ಛೂ ಬಿಡುತ್ತಿದ್ದರು. ಆದರೆ, ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಯ ಮೂಲಕ ಕಾಂಗ್ರೆಸ್ ಕಡೆಯಿಂದ ನಮಗೊಂದು ಸಂದೇಶ ಲಭಿಸಿದೆ. ಅವರ ಹೇಳಿಕೆಯಿಂದ ವಿಷಯ ನಮಗೂ ಅರ್ಥ ಆಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರರ ಜೊತೆ ನಿಮ್ಮ ಸಂಪರ್ಕ ಆಗಿದೆಯೇ ಎಂಬ ಪ್ರಶ್ನೆಗೆ, ‘ಅವರೇ ಕೀ ಪರ್ಸನ್ ಅಲ್ಲವೇ? ಶೀಘ್ರವೇ ಅವರನ್ನು ಸಂಪರ್ಕಿಸುತ್ತೇನೆ ಎಂದು ನುಡಿದರು.