ಸುದ್ದಿಮೂಲ ವಾರ್ತೆ
ಮೈಸೂರು, ಜು.25 : ರಾಜ್ಯದ ಎಲ್ಲಾ ಅಣೆಕಟ್ಟುಗಳು ತುಂಬುವ ಹಂತಕ್ಕೆ ಬಂದಿವೆ. ಕೃಷಿಗಾಗಿ ಎರಡು ದಿನದಲ್ಲಿ ನಾಲೆಗಳಿಗೆ ನೀರು ಬಿಡಿ ಎಂದು ಸರ್ಕಾರಕ್ಕೆ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳಲ್ಲಿ ರೈತರು ಭತ್ತ ನಾಟಿ ಮಾಡಬೇಕು. ಇಲ್ಲವಾದರೆ ಭತ್ತ ಫಸಲು ಬರಲ್ಲ. ಹೀಗಾಗಿ ಭತ್ತ ನಾಟಿಗೆ ನೀರು ನೀಡಲು ಸಿದ್ದತೆ ಮಾಡಿಕೊಳ್ಳಬೇಕು. ರಾಜ್ಯದ ಎಲ್ಲಾ ಸಮಿತಿಗಳು ಸಭೆ ಸೇರಿ ಕೃಷಿಗೆ ನೀರು ನೀಡುವಂತೆ ಒತ್ತಾಯಿಸಿದರು.
ರೈತರ ಅನುಭವದ ಮೇಲೆ ಐಸಿಸಿ ನೀರು ಬಿಡುಗಡೆ ಬಗ್ಗೆ ತೀರ್ಮಾನ ಮಾಡಬೇಕು. ರಾಜ್ಯದಲ್ಲಿ ಬರದ ಛಾಯೆ 100 ತಾಲೂಕಿನಲ್ಲಿ ಇನ್ನೂ ಇದೆ. ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಒಣಗುತ್ತಿದೆ. ಈ ಕುರಿತು ಚಳುವಳಿ ಮಾಡಿದ ನಂತರ ನೀರು ಬಿಟ್ಟಿದ್ದಾರೆ. ಈಗ ಹೋಗುತ್ತಿದ್ದ ಪ್ರಾಣ ಉಳಿಸಿದಂತಿದೆ. ನಾಳೆಯೊಳಗೆ ಕೆ.ಆರ್ ಎಸ್ 110 ಅಡಿ ತುಂಬುವ ಸಾಧ್ಯತೆಯಿದೆ. ಈಗ ನಾವು ಭತ್ತ ಹಾಕುವ ಸಮಯ. ಆಗಸ್ಟ್ ಒಳಗೆ ನಾವು ನಾಟಿ ಮಾಡಬೇಕು. ಸ್ವಲ್ಪ ತಡವಾದರೂ ಬೆಳೆ ನಷ್ಟ ಆಗತ್ತೆ. ಹಾಗಾಗಿ ಅಧಿಕಾರಿಗಳು ಭತ್ತ ಬೆಳೆಯಲು ನೀರು ಕೊಡುವ ಕುರಿತು ಸಭೆ ನಡೆಸಬೇಕು. ಮುಂಗಾರು ಭತ್ತ ಬೆಳೆಯಲು ಸಹಕಾರ ನೀಡಬೇಕು ಎಂದು ಹೇಳಿದರು.