ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಜು 25 : ತಾಲ್ಲೂಕಿನ ಪಿಡಿಒ, ಜೆಇ ಹಾಗೂ ನರೇಗಾ ಸಿಬ್ಬಂದಿಯವರ ಹೊಂದಾಣಿಕೆಯಿಂದ ನರೇಗಾ ಯೋಜನೆಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಉತ್ತಮವಾಗಿ ಕಾರ್ಯರೂಪಕ್ಕೆ ತರುವಂತಾಗಬೇಕು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯವರಾದ ಮುನಿರಾಜು ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ನರೇಗಾ ಸಹಾಯಕ ನಿರ್ದೇಶಕರೊಂದಿಗೆ ಜಂಟಿಯಾಗಿ ನರೇಗಾ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ನರೇಗಾ ಯೋಜನೆ ಕುರಿತು ಸಂಪೂರ್ಣ ಜ್ಞಾನ ಹೊಂದಿರಬೇಕು. ಪ್ರತಿಯೊಂದು ಗ್ರಾಮದ ಮನೆ ಮನೆಗೆ ಭೇಟಿ ನೀಡಿ, ರೈತರ ಹೊಲಗಳಲ್ಲಿ ಕಾಮಗಾರಿ ನಡೆಸಲು ಆದ್ಯತೆ ನೀಡಬೇಕು. ಭೂಮಿ ಸುಧಾರಣೆಗಾಗಿ ರೈತರ ಹೊಲಗಳಲ್ಲಿ ಚೆಕ್ ಡ್ಯಾಂ ನಿರ್ಮಿಸಬೇಕು. ಗ್ರಾಮಗಳಿಗೆ ಭೇಟಿ ನೀಡಿದಾಗ ರೈತರಿಂದ ದನದ ದೊಡ್ಡಿ ಸೇರಿದಂತೆ ನರೇಗಾ ಯೋಜನೆಯಡಿಯಲ್ಲಿ ಅನುಷ್ಠಾನವಾಗುವ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಲಹೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.