ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಜು 25 : ತಾಲೂಕಿನ ಕಾರಹಳ್ಳಿ ಗ್ರಾಮ ಪಂಚಾಯಿತಿಗೆ ನಡೆದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ರಮೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀ ಚಂದ್ರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾಧಿಕಾರಿ ರವೀಂದ್ರ ಸಿಂಗ್ ಘೋಷಿಸಿದರು.
ನೂತನ ಅಧ್ಯಕ್ಷ ರಮೇಶ್ ಮಾತನಾಡಿ, ತಾಲೂಕಿನಲ್ಲಿ ಕಾರಹಳ್ಳಿ ಗ್ರಾಪಂಗೆ ಇತಿಹಾಸವಿದೆ. ಗ್ರಾಪಂಗೆ ಯಾವುದೇ ರೀತಿಯ ಕಪ್ಪುಚುಕ್ಕೆಯಾಗದಂತೆ ಸ್ಥಳೀಯವಾಗಿ ಯಾವುದೇ ಸಮಸ್ಯೆಗಳು, ಕುಂದುಕೊರತೆಗಳು ಇಲ್ಲದಂತೆ ಎಲ್ಲಾ ರೀತಿಯಲ್ಲಿ ಸರ್ವ ಸದಸ್ಯರು ಸರಿಸಮಾನರಾಗಿ ಕಾರ್ಯನಿರ್ವಹಿಸುತ್ತೇವೆ. 18 ಸದಸ್ಯರು ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿರುತ್ತಾರೆ. ಯಾವುದೇ ಚ್ಯುತಿಯಾಗದಂತೆ ಎಚ್ಚರವಹಿಸಿ ಗ್ರಾ.ಪಂಯನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿಕೊಂಡು ಹೋಗಲಾಗುವುದು ಎಂದು ಭರವಸೆ ನೀಡಿದರು.
ನೂತನ ಉಪಾಧ್ಯಕ್ಷೆ ಲಕ್ಷ್ಮೀ ಚಂದ್ರು ಮಾತನಾಡಿ, ಗ್ರಾಪಂಯಲ್ಲಿ ಮೊದಲನೇಯದಾಗಿ ಸ್ವಚ್ಛತೆ ಮತ್ತು ಕುಡಿಯುವ ನೀರಿನ ಬಗ್ಗೆ ಹೆಚ್ಚು ಗಮನಹರಿಸಲಾಗುತ್ತದೆ. ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡಲಾಗುತ್ತದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಎನ್.ರವಿ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಪ್ರತಿ ಹಳ್ಳಿಯಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ತಾಪಂ ಮಾಜಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಕಾರಹಳ್ಳಿ ಗ್ರಾ.ಪಂಯ ಸಮಗ್ರ ಅಭಿವೃದ್ಧಿಗೆ ಮೂಲಭೂತ ಅಗತ್ಯಗಳು, ಸೌಕರ್ಯಗಳನ್ನು ಒದಗಿಸಬೇಕು. ಪಂಚಾಯಿತಿಯನ್ನು ಮಾದರಿಯನ್ನಾಗಿಸಬೇಕೆಂದು ಎಲ್ಲರೂ ಒಗ್ಗೂಡಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಎ.ದೇವರಾಜ್, ಮಾಜಿ ಅಧ್ಯಕ್ಷರಾದ ಚಂದ್ರಿಕ, ರಾಜೇಂದ್ರ, ಗ್ರಾಪಂ ಸದಸ್ಯರಾದ ಜಯರಾಮ್, ಟಿ.ಎಸ್.ರಾಜಣ್ಣ, ಚಂದ್ರಶೇಖರ್, ಮಮತಾ, ಸುಮಜನಕಮಣಿ, ಕೇಶವಮೂರ್ತಿ, ಮುನಿರಾಜು, ವೈ.ಕೆ.ರವಿಕುಮಾರ್, ಕೆಂಪಣ್ಣ, ಶಾಂತಮ್ಮ, ಟಿ.ಆಂಜಿನಪ್ಪ, ನಾಗರತ್ನಮ್ಮ, ಪದ್ಮಮ್ಮ, ಗ್ರಾಪಂ ಪಿಡಿಒ ಸೌಮ್ಯ, ಕಾರ್ಯದರ್ಶಿ ಯಶೋದ್ಕುಮಾರ, ಗ್ರಾಪಂಸಿಬ್ಬಂದಿ ಇದ್ದರು.