ಸುದ್ದಿಮೂಲವಾರ್ತೆ
ಕೊಪ್ಪಳ,ಜು.26:ಉಡುಪಿ ಕಾಲೇಜು ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣ ಅದು ಸಣ್ಣ ವಿಷಯ ಅಂತ ಹೇಳೋದು ತಪ್ಪು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಮಾತನಾಡಿ ಅಶ್ವತ್ಥ ನಾರಾಯಣ ತಾನು ಉಪಮುಖ್ಯಮಂತ್ರಿಯಾಗಿದ್ದೆ ಎಂಬ ಪರಿಜ್ಞಾನವೇ ಇಲ್ಲ. ಅಧಿವೇಶನದಲ್ಲಿ ಸೀರಿಯಸ್ ಆಗಿ ಚರ್ಚೆ ಮಾಡುವಾಗ ಡ್ಯಾನ್ಸ್ ಮಾಡುತ್ತಾರೆ.ಅಂತಹ ಗಿರಾಕಿಯ ಹೇಳಿಕೆಗೆ ಅಂತಹ ಮಹತ್ವ ಕೊಡುವ ಅಗತ್ಯವಿಲ್ಲ ಅವರು ಉಪಮುಖ್ಯಮಂತ್ರಿಯಾಗಿದ್ದರಲ್ಲ. ಸರಕಾರ ನಡೆಸಿದರಲ್ಲ. ದುರಾಡಳಿತ ಮಾಡಿದರು, ಮಕ್ಕಳು ನೆಮ್ಮದಿಯಾಗಿ ಶಾಲೆಗೆ ಹೋಗಲಿಲ್ಲ. ಹಿಜಾಬ್ ವಿಷಯ, ಜಾತಿ ಜಾತಿಗಳ ನಡುವೆ ಚರ್ಚೆಯಾದವು ಎಂದರು.
ಇಂದು ಸುರಕ್ಷಿತವಾಗಿ ಸರಕಾರ ನಡೆಯುತ್ತಿದೆ. ಜನರ ಬಗ್ಗೆ ಚರ್ಚೆಯಾಗುತ್ತಿವೆ.ನಾವು ನೀಡಿರುವ ಗ್ಯಾರಂಟಿಗಳನ್ನು ಕೊಟ್ಟೇ ಕೊಡುತ್ತೇವೆ. ನುಡಿದಂತೆ ನಡೆಯುತ್ತೇವೆ. ಬಿಜೆಪಿಯವರಿಗೆ ಸಮಾಧಾನವಿಲ್ಲ.ಅದರಲ್ಲೂ ವಿಶೇಷವಾಗಿ ಬಿಜೆಪಿಯ ನಾಲ್ಕೈದು ಜನರಿಗೆ ಸಮಾಧಾನವಿಲ್ಲ.ಅಶ್ವತ್ಥನಾರಾಯಣ, ಆರ್. ಅಶೋಕ್ ಸೇರಿದಂತೆ ಕೆಲವರಿಗೆ ಹೊಟ್ಟೆ ಉರಿ ಶುರುವಾಗಿದೆ. ಅದರ ಜೊತೆಗೆ ಕುಮಾರಸ್ವಾಮಿ ಸೇರಿದ್ದಾರೆ.ನಾವು ಮಾಡಿದ ಯೋಜನೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲಿ. ಅವರಿಗೊಂದು ಕಾಲ, ನಮಗೊಂದು ಕಾಲನಾ? ನೇರವಾಗಿ ಸ್ಪೀಕರ್ ಮೇಲೆ ಪೇಪರ್ ಎಸೆದರೆ ಸ್ಪೀಕರ್ ಕ್ರಮ ಕೈಗೊಂಡಿದ್ದಾರೆ.ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರಿಗಳ ನೇಮಕ ಮಾಡುವಂತೆ ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಅನಂತಕುಮಾರ್ ಪತ್ರ ಕೊಟ್ಟಿದ್ದರಲ್ಲ. ಆಗ ಏನೂ ತೊಂದರೆಯಾಗಲಿಲ್ಲವಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತಿದೆಯಲ್ಲ ಅದಕ್ಕೆ ಹೊಟ್ಟೆ ಉರಿ ಅವರಿಗೆ ಬಿಜೆಪಿ ಸರಕಾರವಿದ್ದಾಗಲೇ ಹಿಂದೂ ಕಾರ್ಯಕರ್ತರ ಹೆಚ್ಚು ಹತ್ಯೆಗಳಾಗಿವೆ. ನಳೀನ್ ಕುಮಾರ್ ಕಟೀಲ್ ವಾಹನ ಹಿಡಿದು ಅಲ್ಲಾಡಿಸಿದಾಗ ಅವರದೇ ಸರಕಾರವಿತ್ತಲ್ಲ. ಅವರು ನೆನಪು ಮಾಡಿಕೊಳ್ಳಲಿ ಎಂದರು.
ಬಿ.ಕೆ. ಹರಿಪ್ರಸಾದ್ ರಹಸ್ಯವಾಗಿ ಡಿಕೆಶಿ ಅವರನ್ನು ಭೇಟಿ ಮಾಡಿರುವ ವಿಚಾರ. ಯಾರನ್ನು ಮುಖ್ಯಮಂತ್ರಿ ಮಾಡಬೇಕು, ಇಳಿಸಬೇಕು ಎಂಬ ಶಕ್ತಿ ಇರೋದು ನಮ್ಮ ಪಕ್ಷದ ಹೈಕಮಾಂಡ್ ಬಳಿ ಮಾತ್ರ. ಯಾವ ಒಬ್ಬ ವ್ಯಕ್ತಿಯ ಬಳಿ ಇಲ್ಲ. ಸಿದ್ದರಾಮಯ್ಯ ಅವರ ಆಡಳಿತ, ಚಿಂತನೆಯನ್ನು ಮೆಚ್ಚಿ ಪಕ್ಷದ ಹೈಕಮಾಂಡ್ ಸಿಎಂ ಮಾಡಿದೆ. ನಮ್ಮಲ್ಲಿ ಏನೂ ಮುಸುಕಿನ ಗುದ್ದಾಟವಿಲ್ಲ. ಸರಕಾರ ನೂರಕ್ಕೆ ನೂರರಷ್ಟು ಐದು ವರ್ಷವಿರುತ್ತದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಐದು ವರ್ಷವಿರುತ್ತಾರಾ ಎಂಬ ಪ್ರಶ್ನೆಗೆ ನಾನು ಸಣ್ಣವನು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.