ಸುದ್ದಿಮೂಲ ವಾರ್ತೆ
ಕುಷ್ಟಗಿ,ಜು.26:ಕುಷ್ಟಗಿ ಪಟ್ಟಣದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆ ಪ್ರಯುಕ್ತ ಮಾಜಿ ಸೈನಿಕರು ಸೇರಿದಂತೆ ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಅವರು ಕಾರ್ಗಿಲ್ ಹುತಾತ್ಮ ವೀರಯೋಧರನ್ನು ಬುಧವಾರ ಸ್ಮರಿಸಿದರು.
ಇಲ್ಲಿಯ ಕಾರ್ಗಿಲ್ ವೀರಯೋಧ ಹುತಾತ್ಮ ಮಲ್ಲಯ್ಯ ವೃತ್ತದಲ್ಲಿ ಕುಷ್ಟಗಿ ತಾಲೂಕು ಮಾಜಿ ಸೈನಿಕರ ಸಂಘ ಹಾಗೂ ಮಾಜಿ ಅರೆಸೇನಾಪಡೆ ಸಂಘದ ಸದಸ್ಯರು ಸಮಾವೇಶಗೊಂಡು ವಿಜಯ ಘೋಘಣೆಗಳನ್ನು ಮೊಳಗಿಸಿದರು. ನಂತರ ವೃತ್ತಕ್ಕೆ ಪೂಜೆ ನೆರವೇರಿಸಿ ಪುಷ್ಪ ಸಮರ್ಪಿಸುವ ಮೂಲಕ ಕಾರ್ಗಿಲ್ ಹುತಾತ್ಮ ವೀರಯೋಧರಿಗೆ ಗೌರವ ಸಲ್ಲಿಸಿದರು.
ಶಾಸಕ ದೊಡ್ಡನಗೌಡ ಪಾಟೀಲ್ ಅವರು ವಿಜಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹುತಾತ್ಮ ಯೋಧರ ತ್ಯಾಗ ಬಲಿದಾನದಿಂದ ದೇಶದಲ್ಲಿ ಎಲ್ಲರೂ ಭಯ ಆತಂಕವಿಲ್ಲದೇ ಸುಭಿಕ್ಷವಾಗಿ ಬದುಕಲು ಸಾಧ್ಯವಾಗಿದೆ. ದೇಶ ಕಾಯುವ ಸೈನಿಕರನ್ನು ಹಾಗೂ ಮಾಜಿ ಸೈನಿಕರನ್ನು ನಾವು ಗೌರವದಿಂದ ಕಾಣಬೇಕು ಎಂದು ಹೇಳಿದರು.
ಮಾಜಿ ಅರೆಸೇನಾಪಡೆ ಸಂಘಧ ತಾಲೂಕಾಧ್ಯಕ್ಷ ಶರಣಯ್ಯ ಹಿರೇಮಠ ಅವರು ಮಾತನಾಡಿ, ಭಾರತೀಯರು ಎಂದು ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕೂಡಾ ಹೌದು. ಕಾರ್ಗಿಲ್ ಯುದ್ಧ ಭಾರತೀಯ ಪ್ರತಿಯೋಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಜಮ್ಮು ಕಾಶ್ಮೀರದ ಕಾರ್ಗಿಲ್ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ. ಇಂದು ನಮ್ಮ ದೇಶದ ಪ್ರಧಾನಿ ಮೋದಿ ಅವರು ಭಾರತೀಯ ಸೈನ್ಯವನ್ನು ಮತ್ತಷ್ಟು ಬಲಪಡಿಸಿದ್ದಾರೆ. ಪ್ರತಿಯೊಬ್ಬ ಯುವಕರು ದುಶ್ಚಟಗಳಿಗೆ ಬಲಿಯಾಗದೇ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು. ಸೈನ್ಯವನ್ನು ಸೇರಿ ದೇಶ ಸೇವೆಯನ್ನು ಮಾಡಬೇಕು ಎಂದರು.
ಮಾಜಿ ಸೈನಿಕರ ಸಂಘದ ತಾಲೂಕ ಅಧ್ಯಕ್ಷ ಸುಭಾಷ್ ಮಡಿವಾಳರ, ಶಿವಪ್ಪ ಕುಡುತಿನಿ ಮಾಜಿ ಅರೆಸೇನಾಪಡೆ ಸಂಘದ ತಾಲೂಕ ಅಧ್ಯಕ್ಷ ಶರಣಯ್ಯ ಹಿರೇಮಠ, ಉಪಾಧ್ಯಕ್ಷ ಶಿವಾಜಿ ಹಡಪದ, ಭೀಮಪ್ಪ ವಗ್ಗರ್, ಎಲ್ಲಪ್ಪ ವಗ್ಗರ್, ಭೀಮನಗೌಡ ಜಾಲಿಹಾಳ, ಸುರೇಶ್ ದಾಸರ, ವೀರಭದ್ರಯ್ಯ ಹಿರೇಮಠ, ಶಂಕ್ರಪ್ಪ ಕೌಡಿಕಾಯ್, ಕಾಶಿಂಸಾಬ್, ಬಸನಗೌಡ ಗೌಡ್ರು, ಚೌಡರಾಜ್ ಹಿರೇಮನಿ, ಮುತ್ತಣ್ಣ ಬಾಚಲಾಪೂರ ಇನ್ನಿತರರು ಉಪಸಿತರಿದ್ದರು.