ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.26: ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ, ಬೆಲೆ ಏರಿಕೆ ಕಾರಣದಿಂದ ಬಡವರು-ಮಧ್ಯಮ ವರ್ಗದವರು ಹೈರಾಣಾಗಿರುವ ಹೊತ್ತಲ್ಲೇ ಬಿಜೆಪಿಯ ದ್ವೇಷ ರಾಜಕಾರಣ ಇಡಿ ದೇಶವನ್ನು ಆವರಿಸುತ್ತಿದೆ. ನಾವು ದ್ವೇಷ ಅಳಿಸಿ ಪ್ರೀತಿಯ ಭಾರತವನ್ನು ಪುನರ್ ನಿರ್ಮಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅರಮನೆ ಮೈದಾನದಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಆಯೋಜಿಸಿದ್ದ “ಉತ್ತಮ ಭಾರತದ ಅಡಿಪಾಯ” ರಾಷ್ಟ್ರೀಯ ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ನಿರುದ್ಯೋಗ, ಬಡತನ ಹೆಚ್ಚಾಗುವಾಗಲೇ ದೇಶದಲ್ಲಿ ದ್ವೇಷವನ್ನು ಹರಡುವ ಪಿತೂರಿ ರಾಜಕಾರಣ ನಡೆಯುತ್ತಿದೆ. ನೆಹರೂ ಅವರ ಕಾಲದಿಂದ ಭಾರತಕ್ಕೆ ಹಾಕಲಾಗಿರುವ ಮಾನವೀಯತೆ, ಜಾತ್ಯತೀತತೆ ಮತ್ತು ವೈಜ್ಞಾನಿಕ ಪ್ರಗತಿ ಮತ್ತು ಅಭಿವೃದ್ಧಿಯ ಅಡಿಪಾಯ ಮೋದಿ ಅವರು ಪ್ರಧಾನಿ ಆದ ನಂತರ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸಾವಿರಾರು ವರ್ಷಗಳಿಂದ ಸಾಮರಸ್ಯದಿಂದ ಇದ್ದ ಭಾರತವನ್ನು ಮೋದಿ ಅವರು ಪ್ರಧಾನಿ ಆದ ಬಳಿಕ ಬಿಜೆಪಿ-ಆರ್ಎಸ್ಎಸ್ ಪರಿವಾರದ ಕಾರ್ಯಕರ್ತರು ಹಾಳುಗೆಡವಿದ್ದಾರೆ. ಆದರೆ, ಈ ಸಮಾವೇಶ ಮತ್ತೆ ನಮ್ಮ ಭಾರತವನ್ನು ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದಲ್ಲಿ ಮತ್ತೆ ಎತ್ತಿ ನಿಲ್ಲಿಸಲು ನೆರವಾಗುತ್ತದೆ ಎಂದರು.
ಈ ದೇಶದ ರೈತರು, ಕಾರ್ಮಿಕರು, ಶ್ರಮಿಕರ ಸಮಸ್ಯೆಗಳ ಬಗ್ಗೆ ಯಾವತ್ತೂ ಮಾತನಾಡದ ಬಿಜೆಪಿ ಪರಿವಾರ ಈ ರೈತ-ಕಾರ್ಮಿಕ-ಶ್ರಮಿಕರ ಮಕ್ಕಳು, ವಿದ್ಯಾರ್ಥಿಗಳನ್ನೇ ದ್ವೇಷದ ಕುಲುಮೆಗೆ ತಳ್ಳಿ ದೇಶವನ್ನು ಮತ್ತೆ ಹಿಂದಕ್ಕೆ ಎಳೆದೊಯ್ಯುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಈ ದೇಶದ ಯುವಕರು, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎನ್ನುವ ನಂಬಿಕೆ ನನಗಿದೆ ಎಂದರು.
ಕಾಂಗ್ರೆಸ್ ಸಂವಿಧಾನದ ಆಶಯಗಳಿಗೆ ಬದ್ದವಾಗಿದೆ. ಕಾರ್ಮಿಕರು, ಮಹಿಳೆಯರು, ದಲಿತ, ಶೂದ್ರರು, ಹಿಂದುಳಿದವರು, ಎಲ್ಲಾ ಜಾತಿಯ ಬಡವರ ಬದುಕನ್ನು ಉನ್ನತೀಕರಿಸುವ ಮತ್ತು ಈ ಎಲ್ಲಾ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವ ಅಭಿಯಾನವನ್ನು ಕಾಂಗ್ರೆಸ್ ನಿರಂತರವಾಗಿ ನಡೆಸುತ್ತಾ, ಹೋರಾಟ ನಡೆಸುತ್ತಿದೆ. ಸಾಮಾಜಿಕ ನ್ಯಾಯದ ಪರಂಪರೆಯನ್ನು ಮುನ್ನಡೆಸುವ ರಥ ಕಾಂಗ್ರೆಸ್ ಪಕ್ಷ ಎಂದರು.
ಚುನಾವಣೆಗೆ ಈಗಲೇ ತಯಾರಿ ಆರಂಭಿಸಿ:
ದೇಶದ ಬಹುದೊಡ್ಡ ಜವಾಬ್ದಾರಿ ಯುವ ಸಮೂಹದ ಮೇಲಿದ್ದು, 2024ರ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಬೂತ್ ಮಟ್ಟದಲ್ಲಿ ಕೆಲಸ ಪ್ರಾರಂಭಿಸಿ. ಬೂತ್ ಗೆದ್ದರೆ ಕ್ಷೇತ್ರ ಗೆದ್ದಂತೆ. ಪ್ರತಿ ಬೂತ್ ಅನ್ನು ಡಿಜಿಟಲ್ ಮಾಡಿ, ಸಂಘಟನೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಇದೇ ಅರಮನೆ ಮೈದಾನದಲ್ಲಿ ರಾಜೀವ್ ಗಾಂಧಿ ಅವರು ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಆಗ ಕೆ.ಜೆ.ಜಾರ್ಜ್ ಯುವ ಕಾಂಗ್ರೆಸ್ ಅಧ್ಯಕ್ಷರು, ನಾನು ಕಾರ್ಯದರ್ಶಿಯಾಗಿದ್ದೆ, ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ರಾಜ್ಯ. 1999 ರಲ್ಲಿ ಬಳ್ಳಾರಿಯಿಂದ ಸೋನಿಯಾ ಗಾಂಧಿ ಅವರನ್ನು ಆಯ್ಕೆ ಮಾಡಿದ್ದು ಇದೇ ಕನ್ನಡಿಗರು ಎಂದರು ಎಂದು ನೆನಪು ಮಾಡಿಕೊಂಡರು.
2023 ರ ವಿಧಾನಸಭಾ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಕೊಡುಗೆಯನ್ನು ಮರೆಯುವಂತಿಲ್ಲ. ಸಾಕಷ್ಟು ಶ್ರಮವಹಿಸಿ ಪಕ್ಷವನ್ನು ತಳಮಟ್ಟದಲ್ಲಿ ಕಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು. ಜೊತೆಗೆ ಯಾವುದೇ ಅಪೇಕ್ಷೆ ಇಲ್ಲದೆ, ಪಕ್ಷಕ್ಕೆ ಯಾವುದೇ ಹೊರೆ ಹಾಕದೆ ಪಕ್ಷದ ಗೆಲುವಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಡೀ ದೇಶದ ಕಣ್ಣು ಕರ್ನಾಟಕದ ಮೇಲಿದೆ. ಪಿತೂರಿ ಮಾಡಿ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಇಳಿಸಲಾಗಿದೆ. ಪ್ರಸ್ತುತ ಬಹುದೊಡ್ಡ ಜವಾಬ್ದಾರಿ ನಮ್ಮ- ನಿಮ್ಮ ಮೇಲಿದೆ. 2024 ರ ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ. ಅದಕ್ಕೆ ಈಗಿನಿಂದಲೇ ಬೂತ್ ಮಟ್ಟದಲ್ಲಿ ಕೆಲಸ ಪ್ರಾರಂಭಿಸಿ. ಬೂತ್ ಗೆದ್ದರೆ ಕ್ಷೇತ್ರ ಗೆದ್ದಂತೆ. ಪ್ರತಿ ಬೂತ್ ಅನ್ನು ಡಿಜಿಟಲ್ ಮಾಡಿ, ಸಂಘಟನೆ ಮಾಡಿ. ಆಗ ಹೊಸ ಭಾರತ ನಿರ್ಮಿಸಲು ಯುವ ಕಾಂಗ್ರೆಸ್ಸಿಗರಿಗೆ ಸಾಧ್ಯ ಎಂದು ಹೇಳಿದರು.