ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.27: ಕಂದಾಯ ಇಲಾಖೆ ಎಲ್ಲ ಇಲಾಖೆಗಳ ಮಾತೃ ಇಲಾಖೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಕಂದಾಯ ಇಲಾಖೆ ನೌಕರರೂ ಸಹ ಮಾತೃ ಹೃದಯದಿಂದ ಜನಸೇವೆಗೆ ಮುಂದಾಗಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಕಿವಿಮಾತು ಹೇಳಿದರು.
ಕಂದಾಯ ದಿನಾಚರಣೆಯ ಅಂಗವಾಗಿ ಇಲಾಖೆ ನೌಕರರ ಸಂಘದ ವತಿಯಿಂದ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕಾರ್ಯಕ್ರಮ ಹಾಗೂ ಕಂದಾಯ ಇಲಾಖೆ ನೌಕರರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಸರ್ಕಾರದ ದುರಾಡಳಿತದಿಂದ ಬೇಸತ್ತಿದ್ದ ಜನ ಭರವಸೆಯಿಂದ ನಮಗೆ ಅಧಿಕಾರ ನೀಡಿದ್ದಾರೆ. ನಮ್ಮ ಸರ್ಕಾರದ ಮೇಲೆ ಜನರಿಗೆ ಭರವಸೆ ಇದೆ. ಆದರೆ, ಸರ್ಕಾರಿ ನೌಕರರ ಸಹಕಾರ ಇಲ್ಲದೆ ಜನಸೇವೆ ಹಾಗೂ ಉತ್ತಮ ಆಡಳಿತ ಅಸಾಧ್ಯ. ನಮ್ಮೆಲ್ಲರ ಮೇಲೆ ಜವಾಬ್ದಾರಿ ಇದೆ. ಕಂದಾಯ ಇಲಾಖೆ ಎಲ್ಲ ಇಲಾಖೆಗಳ ಮಾತೃ ಇಲಾಖೆ ಎಂದು ಹೇಳಿದರೆ ಮಾತ್ರ ಸಾಲದು. ಜನಸೇವೆಯನ್ನೂ ಮಾತೃ ಹೃದಯದಿಂದ ಮಾಡಬೇಕು ಎಂದರು.
ಕಂದಾಯ ಇಲಾಖೆ ಮನಸ್ಸು ಮಾಡಿದರೆ ಜನರಿಗೆ ಒಳ್ಳೆಯದನ್ನೂ ಮಾಡಬಹುದು ಕೆಟ್ಟದ್ದನ್ನೂ ಮಾಡಬಹುದು. ಆದರೆ, ಜನರಿಗೆ ಒಳಿತನ್ನು ಮಾಡುವುದಷ್ಟೆ ನಮ್ಮ ಕೆಲಸವಾಗಲಿ. ಕಂದಾಯ ಇಲಾಖೆ ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ಜನರ ಜೊತೆಗೆ ಸಂಪರ್ಕ ಹೊಂದಿರುವ ಇಲಾಖೆ. ಜನ ಸೇವೆ ಮಾಡಲು ನಿಮಗೆ ಅವಕಾಶ ಸಿಕ್ಕಿದೆ, ಅವಕಾಶ ಸಿಗದವರು ಕೋಟ್ಯಂತರ ಜನ ಹೊರಗಿದ್ದಾರೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಅಲ್ಲದೆ, “ಕಂದಾಯ ಇಲಾಖೆಯಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ನಮ್ಮ ಪಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಮೇಲೆ ಭರವಸೆ ಇಟ್ಟು ಈ ಜವಾಬ್ದಾರಿ ನೀಡಿದ್ದಾರೆ. ನೀವು-ನಾವು ಮನಸ್ಸು ಮಾಡಿದರೆ ಜನಕ್ಕೆ ಒಳ್ಳೆಯ ಕೆಲಸ ಮಾಡಬಹುದು. ಸರ್ಕಾರಕ್ಕೂ ಒಳ್ಳೆಯ ಹೆಸರು ತರಬಹುದು.
ನಿಮ್ಮ ನ್ಯಾಯಯುತ ಕೋರಿಕೆಗಳನ್ನು ಈಡೇರಿಸಲೂ ಸಹ ನಾವು ಸಿದ್ದರಾಗಿದ್ದೇವೆ. ಈಗಾಗಲೇ ಕಂದಾಯ ಇಲಾಖೆ ಆಯುಕ್ತಾಲಯವನ್ನು ಕೇವಲ ಎರಡು ತಿಂಗಳಲ್ಲಿ ನಿರ್ಮಿಸಲಾಗಿದೆ. ಮುಂಬಡ್ತಿಗೆ ಸಂಬಂಧಿಸಿದ ನಿಮ್ಮ ಕೋರಿಗೆಯ ಬಗ್ಗೆಯೂ ಚಿಂತಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಸಂಘದ ವೆಬ್ಸೈಟ್ ಬಿಡುಗಡೆ ಮಾಡಲಾಯಿತು. ಸಚಿವರ ತಂದೆ ದಿವಂಗತ ಮಾಜಿ ಸಚಿವ ಸಿ ಬೈರೇಗೌಡ ಅವರ ವರ್ಣಚಿತ್ರ ಉಡುಗೊರೆಯಾಗಿ ನೀಡಲಾಯಿತು. ಕೆಎಎಸ್ ಸಂಘದ ಅಧ್ಯಕ್ಷರಾದ ರವಿ ತಿರ್ಲಾಪುರ, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.