ಸುದ್ದಿಮೂಲ ವಾರ್ತೆ
ಮಾಲೂರು, ಜು, 28 : ಸರ್ಕಾರದ ಹಾಗೂ ದಾನಿಗಳು ನೀಡುವ ಸವಲತ್ತುಗಳನ್ನು ಬಳಸಿಕೊಂಡು ಸರ್ಕಾರಿ ಶಾಲೆಗಳಲ್ಲಿ ಉತ್ತಮ ವಾತಾವರಣದೊಂದಿಗೆ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಿಕೊಂಡು ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದು ಬಿಇಓ ಎಚ್. ಸಿ ಚಂದ್ರಕಲಾ ಹೇಳಿದರು
ತಾಲೂಕಿನ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ದಾನಿಗಳ ಸಹಕಾರದಿಂದ ನಿರ್ಮಿಸಿರುವ ನೂತನ ಕಟ್ಟಡದಲ್ಲಿ ಗ್ರಂಥಾಲಯ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಕೆಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು, ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರ ಪಡೆದು ಶಾಲೆಯ ಕಟ್ಟಡಗಳನ್ನು ನಿರ್ಮಿಸಿಕೊಂಡು ಉತ್ತಮ ವಾತಾವರಣವನ್ನು ನಿರ್ಮಾಣ ಮಾಡುವ ಮೂಲಕ ಗುಣಾತ್ಮಕವಾದ ಶಿಕ್ಷಣವನ್ನು ನೀಡಲಾಗುತ್ತಿದೆ. ಇದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚು ಮಾಡಿಕೊಳ್ಳಲು ಒಳ್ಳೆಯ ಬೆಳವಣಿಗೆ.
ಸರ್ಕಾರಿ ಶಾಲೆಯ ಶಿಕ್ಷಕರು ಗ್ರಂಥಾಲಯ ಕೊಠಡಿ ನಿರ್ಮಿಸಿ ಮಕ್ಕಳ ಕಲಿಕೆಗೆ ಗೋಡೆ ಬರಹಗಳನ್ನು ಬರೆಯಿಸಿ, ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಇಟ್ಟಿರುವುದರಿಂದ ಇತರೆ ಶಾಲೆಯ ಶಿಕ್ಷಕರಿಗೆ ಮಾದರಿಯಾಗಿದ್ದಾರೆ . ದಾನಿಗಳ ಸಹಕಾರ ಪಡೆದು ಕೊಠಡಿಗಳನ್ನು ನಿರ್ಮಿಸಿಕೊಳ್ಳಬಹುದು.
ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಂ.ಜಿ ನಾಗರಾಜ್ ಮಾತನಾಡಿ, ಮಕ್ಕಳು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ನೆನಪಿನ ಶಕ್ತಿ ವೃದ್ಧಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯ ಹಾಗೂ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ. ಸಮುದಾಯ ಹಾಗೂ ಶಿಕ್ಷಕರ ನಡುವೆ ಅಂತರ ಹೆಚ್ಚುತ್ತಿದೆ. ಶಿಕ್ಷಕರು ಹಾಗೂ ಸಮುದಾಯದ ನಡುವೆ ಅವಿನಾಭಾವ ಸಂಬಂಧ ಇದ್ದರೆ ಮಾತ್ರ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುಳಾ, ಮಾಜಿ ಸದಸ್ಯ ವಿಶ್ವನಾಥ್, ಬಿ ಆರ್ ಸಿ ಸಮನ್ವಯಧಿಕಾರಿ ನಂಜುಂಡಗೌಡ, ಸಿ ಆರ್ ಪಿ ಗಳಾದ ನಾಗರಾಜ್, ಮುನಿರಾಜು ಐ ಆರ್ ಟಿ ಮೋಹನ್ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಗದೀಶ್, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್, ಸಹ ಶಿಕ್ಷಕ ಮುನಿರಾಜು, ಭಾವನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮುನಿನಾರಾಯಣಪ್ಪ, ಸಹ ಶಿಕ್ಷಕರುಗಳಾದ ಉಮೇಶ್, ರಮೇಶ್, ಶಂಕರ್ ನಾರಾಯಣ್ ಸಿಂಗ್, ಮುನಿಯಪ್ಪ, ಕೃಷ್ಣಮೂರ್ತಿ, ನಾಗಾನಂದ್, ಶಾಲೆಯ ಹಳೆಯ ವಿದ್ಯಾರ್ಥಿ ಕುಮಾರ್, ತಿಪ್ಪಣ್ಣ, ಲೋಕೇಶ್, ಆನಂದ್, ಶಿಕ್ಷಕರುಗಳಾದ ಉಮೇಶ್ಇನ್ನಿತರರು ಹಾಜರಿದ್ದರು