ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.28: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಬಸ್ಗಳ ಬಾಡಿಗೆ ದರಗಳನ್ನು ಪರಿಷ್ಕರಣೆ ಮಾಡಿದೆ. ಬಸ್ಗಳ ಪ್ರಯಾಣ ದರವನ್ನು ಕಿ. ಮೀ.ಗೆ 2 ರೂ. ನಿಂದ 5 ರೂ. ತನಕ ಏರಿಕೆ ಮಾಡಲಾಗಿದೆ.
ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ದರವು ಜಾರಿಗೆ ಬರಲಿದೆ ಎಂದು ಕೆಎಸ್ಆರ್ಟಿಸಿ ಹೇಳಿದೆ. ಆದರೆ ಈ ಹಿಂದೆಯೇ ಬಾಡಿಗೆ ಬುಕ್ ಮಾಡಿದ ಒಪ್ಪಂದಗಳಿಗೆ ಹಿಂದಿನ ದರವೇ ಇರಲಿದೆ ಎಂದು ನಿಗಮ ಸ್ಪಷ್ಟನೆಯನ್ನು ನೀಡಿದೆ.
ಪ್ರವಾಸ, ಮದುವೆ ಹಾಗೂ ಇನ್ನಿತರ ಉದ್ದೇಶಗಳಿಗೆ ಸಾಂದರ್ಭಿಕ ಒಪ್ಪಂದದ ಮೇರೆಗೆ ಬಸ್ಗಳನ್ನು ಕೆಎಸ್ಆರ್ಟಿಸಿ ನೀಡುತ್ತದೆ. ಈ ಬಸ್ಗಳ ಬಾಡಿಗೆ ದರವನ್ನು ಏರಿಕೆ ಮಾಡಲಾಗಿದೆ. ಈ ಮೊದಲು ಕನಿಷ್ಠ 300 ಕಿ. ಮೀ. ಪ್ರಯಾಣ ನಿಗದಿ ಮಾಡಲಾಗಿತ್ತು, ಈಗ ಅದನ್ನು 350ಕ್ಕೆ ಪರಿಷ್ಕರಣೆ ಮಾಡಲಾಗಿದೆ. ಅಲ್ಲದೇ ಮೈಸೂರು ನಗರದಲ್ಲಿ ಗಂಟೆಗಳ ಆಧಾರದಲ್ಲಿ ವಾಹನಗಳನ್ನು ಒದಗಿಸುವ ವ್ಯವಸ್ಥೆಯನ್ನು ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಸಾರಿಗೆ ಬಸ್ನ ಪರಿಷ್ಕೃತ ಬಾಡಿಗೆ ದಿನಕ್ಕೆ ಕನಿಷ್ಠ 350 ಕಿ. ಮೀ. ಆಗಿದೆ. ರಾಜ್ಯದೊಳಗೆ ಪ್ರತಿ ಕಿ. ಮೀ. ಬಾಡಿಗೆ ದರ 47 ರೂ. ಮತ್ತು ಹೊರ ರಾಜ್ಯಕ್ಕೆ 50 ರೂ. ಆಗಿದೆ.
ಉಳಿದಂತೆ ರಾಜಹಂಸ ಎಕ್ಸಿಕ್ಯೂಟಿವ್, ರಾಜಹಂಸ, ಮಿಡಿ ಬಸ್, ನಾನ್ ಎಸಿ ಸ್ಲೀಪರ್, ಮೈಸೂರು ನಗರ ಸಾರಿಗೆ ಸೆಮಿ ಲೋ ಫ್ಲೋರ್ ಬಸ್ಗಳು ಸೇರಿದಂತೆ ಎಲ್ಲಾ ಬಾಡಿಗೆ ಬಸ್ಗಳ ದರ ಹೆಚ್ಚಾಗಿವೆ.