ಸುದ್ದಿಮೂಲವಾರ್ತೆ
ಕೊಪ್ಪಳ,ಜು.29: ಹಿಜರಿ ಶಕೆಯಲ್ಲಿ ಮೊದಲು ತಿಂಗಳು ಮೊಹರಂ. ಮೊಹರಂ ಹಬ್ಬ ಮುಸ್ಲಿಂ ಬಾಂಧವರ ಹಬ್ಬ ಎನ್ನುತ್ತಾರೆ. ಆದರೆ ಕೊಪ್ಪಳ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಮುಸ್ಲಿಂರಿಗಿಂತ ಅಧಿಕವಾಗಿ ಹಿಂದುಗಳು ಆಚರಿಸುತ್ತಾರೆ. ವೈವಿದ್ಯಮಯ. ಭಾವೈಕ್ಯತೆ ಸಂಕೇತವಾಗಿರುವ ಮೊಹರಂ ಒಂದು ದೊಡ್ಡ ಹಬ್ಬ. ಇಂದು ಮೊಹರಂ ಕಡೆಯ ದಿನ ಅಲಾಯಿ ದೇವರ ಮೆರವಣಿಗೆ ವಿಶೇಷವಾಗಿರುತ್ತದೆ.
ಮೊಹರಂ ತಿಂಗಳು ಆರಂಭವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಹಲಗಿಗಳ ಬಡಿತ ಕೇಳಿ ಬರುತ್ತದೆ. ಐದು ದಿನ ಅಲಾಯಿ ದೇವರನ್ನು ಆಶೂರಖಾನೆಯಲ್ಲಿ ಪ್ರತಿಷ್ಠಾಪಿಸಿರುತ್ತಾರೆ. ಈ ಸಂದರ್ಭದಲ್ಲಿ ಎಲ್ಲಾ ಜಾತಿ, ಧರ್ಮದವರು ಮೊಹರಂ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ.
ಹಲವರು ಅಳ್ಳೊಳ್ಳಿ ಬೌವ್ ಗಳಾಗುತ್ತಾರೆ. ತಲೆಗೆ ಅಳ್ಳೊಳ್ಳಿಗಳನ್ನು ಹಾಕಿಕೊಂಡು ಮೈಗೆ ಕರಿ ಬಣ್ಣ ಹಾಕಿಕೊಳ್ಳುವ ಒಂದು ಹರಕೆ. ಇಡೀ ದೇಹಕ್ಕೆ ಹುಲಿ ಬಣ್ಣ ಹಾಕಿಕೊಂಡು ಗೆಜ್ಜಿ ಕಟ್ಟಿಕೊಂಡು ಹಲಗಿ ತಾಳಕ್ಕೆ ತಕ್ಜಂತೆ ಕುಣಿಯುವ ಹುಲಿವೇಷಗಾರರು. ಗುಂಪು ಗುಂಪಾಗಿ ಕುಣಿಯುವ ಹುಲಿವೇಷಗಾರರ ಕುಣಿತ ನೋಡುವುದು ಖುಷಿ. ಇನ್ನೊಂದು ಕಡೆ ಹಲಗಿ ತಾಳಕ್ಕೆ ಕೈಯಲ್ಲಿ ಛತ್ರಿ ಹಿಡಿದು, ಛತ್ರಿಗೆ ಬಣ್ಣ ಬಣ್ಣದ ರಿಬ್ಬನ್ ಕಟ್ಟಿ ಭರ್ಜರಿ ಕುಣಿಯುವ ಹೆಜ್ಜೆ ಮೇಳ ನೋಡಲು ವಿಶಿಷ್ಠವಾಗಿರುತ್ತದೆ. ಐದು ದಿನವು ಈ ವೈವಿದ್ಯಮಯ ಆಚರಣೆಯನ್ನು ಜನ ನೋಡಿ ಖುಷಿ ಪಡುತ್ತಾರೆ.
ಇಂದು ಮೊಹರಂ ಕೊನೆಯ ದಿನ ಮುಂಜಾನೆಯೇ ಬಹುತೇಕ ಗ್ರಾಮಗಳಲ್ಲಿ ಅಲಾಯಿ ದೇವರ ಮೆರವಣಿಗೆ( ಸವಾರಿ) ಹೋಗುತ್ತವೆ. ಅಲ್ಲಲ್ಲಿ ದೇವರು ಬೆಂಕಿಯಲ್ಲಿ ಹಾಯಿಯುವ ಪವಾಡವು ಸಹ ನಡೆಯುತ್ತದೆ. ಸಂಜೆ ಹೆಜ್ಜೆ. ಹುಲಿ. ಅಳ್ಳೊಳ್ಳಿ ಬೌವ್ ಗಳೊಂದಿಗೆ ಮೆರವಣಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಎಲ್ಲಾ ಜನಾಂಗದ ಜನರು ಪಾಲ್ಗೊಳ್ಳುವುದು ವಿಶೇಷವಾಗಿರುತ್ತದೆ.
ಕೊಪ್ಪಳ ಜಿಲ್ಲೆಯಲ್ಲಿಯ ಕುಕನೂರು ತಾಲೂಕಿನ ಕುದ್ರಿಮೋತಿ. ಕುಷ್ಟಗಿ ತಾಲೂಕಿನ ಹನುಮಸಾಗರ, ತಾವರಗೇರಾ ಸೇರಿ ಇಡೀ ಜಿಲ್ಲೆಯಲ್ಲಿ ಮೊಹರಂ ಸಂಭ್ರಮ ಇರುತ್ತದೆ. ಈ ವರ್ಷ ಜಿಲ್ಲೆಯಲ್ಲಿ ಆರು ಗ್ರಾಮಗಳು ಹೊರತುಪಡಿಸಿ ಉಳಿದೆಡೆ ಮೊಹರಂ ಸಂಭ್ರಮ ಮನೆ ಮಾಡಿದೆ. ಇಲ್ಲಿ ಹಿಂದು ಮುಸ್ಲಿಂ ಜನಾಂಗದವರು ಒಟ್ಟಾಗಿ ಮೊಹರಂ ಆಚರಿಸಿ ಇದು ಭಾವೈಕ್ಯ ಹಬ್ಬ ಎಂಬುವುದು ಮತ್ತೆ ಸಾಬೀತು ಮಾಡಿದೆ.