ಸುದ್ದಿಮೂಲ ವಾರ್ತೆ
ಹೊಸಕೋಟೆ, ಜು 30 : ರಸ್ತೆಗುಂಡಿ ಮುಚ್ಚುವಂತೆ ಹೆದ್ದಾರಿ ಗುಂಡಿಯಲ್ಲೇ ಅಣಕು ಶವಸಂಸ್ಕಾರ ನಡೆಸಿ ಭೀಮ್ ಸೇವಾ ಸಮಿತಿಯಿಂದ ವಿನೂತನ ಪ್ರತಿಭಟನೆ ನಡೆಸಲಾಯಿತು.
ಹೊಸಕೋಟೆಯಿಂದ ಮಾಲೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಣಕು ಶವಸಂಸ್ಕಾರ ಮಾಡಿ ಭೀಮ್ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ರಾದ ಶ್ರೀಕಾಂತ್ ರಾವಣ್ ಮಾತನಾಡಿ, ಹೊಸಕೋಟೆಯಿಂದ ಮಾಲೂರಿಗೆ ತೆರಳು ರಾಜ್ಯ ಹೆದ್ದಾರಿ 95 ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಕಳೆದ ಮೂರು ವರ್ಷಗಳಿಂದ ಮಳೆಬಿದ್ದಾಗಲೆಲ್ಲಾ ರಸ್ತೆಯಲ್ಲೆ ನೀರು ಹರಿದು ರಸ್ತೆಯೂ ಸಾಕಷ್ಟುಗುಂಡಿಗಳಿಂದ ಕೂಡಿದ್ದು ವಾಹನ ಸವಾರರು ಪರದಾಡುವಂತಾಗಿದೆ.
ರಸ್ತೆಯಲ್ಲಿ ಗುಂಡಿಯಿದೆಯೋ ಅಥವಾ ಗುಂಡಿಗಳಲ್ಲಿ ರಸ್ತೆಯಿದೆಯೋ ಎಂಬಂತಾಂಗಿದ್ದು, ಗುಂಡಿಗಳಿಂದಾಗಿ ಅರ್ಧಗಂಟೆಯ ಪ್ರಯಾಣ ಒಂದುವರೆಗಂಟೆಗೂ ಹೆಚ್ಚು ಸಮಯ ವ್ಯರ್ಥವಾಗುವುದರ ಜೊತೆಗೆ ವಾಹನಗಳು ನಡುರಸ್ತೆಯಲ್ಲೆ ಕೆಟ್ಟುನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಸಾಕಷ್ಟು ಅಪಘಾತಗಳು ಸಹ ಆಗಿದ್ದು, ಲೋಕೋಪಯೋಗಿ ಇಲಾಖೆ ಕೇವಲ ತೇಪೆ ಹಾಕುವ ಕೆಲಸ ಮಾಡುತ್ತಿದೆ. ರಸ್ತೆಬದಿಯಲ್ಲಿ ಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ನೀರು ರಸ್ತೆಯಲ್ಲೆ ಹರಿಯುವ ಕಾರಣದಿಂದ ಎಷ್ಟೇ ಭಾರಿ ಗುಂಡಿ ಮುಚ್ಚಿದರೂ ಸಹ ಸಮಸ್ಯೆ ಬಗೆಹರಿದಿಲ್ಲ. ರಸ್ತೆಯನ್ನು ಸಂಪೂರ್ಣವಾಗಿ ಮರು ಡಾಂಬರೀಕರಣ ಮಾಡಿದರೆ ಮಾತ್ರವೇ ವಾಹನ ಸವಾರರು ನಿಟ್ಟುಸಿರು ಬಿಟ್ಟಂತಾಗಿ ಸುಗಮ ಸಂಚಾರ ಸಾಧ್ಯವಾಗುತ್ತದೆ.
ಈ ಸಂಧರ್ಭದಲ್ಲಿ ಚಾಲಕರ ಘಟಕದ ಜಿಲ್ಲಾಧ್ಯಕ್ಷರಾದ ಮುನಿರಾಜು, ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷರಾದ
ಮಧು ಚಕ್ರವರ್ತಿ, ಕಿರಣ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಯುವ ಘಟಕ ತಾಲ್ಲೂಕು ಅಧ್ಯಕ್ಷ ಜೋಯಲ್, ಉಪಾಧ್ಯಕ್ಷ ಜಯರಾಜ್ ಸೇರಿದಂತೆ ಸ್ಥಳೀಯರು ಇದ್ದರು.