ನವದೆಹಲಿ, ಜು.30: ಕರ್ನಾಟಕ ಸೇರಿ ದೇಶದ ಹಲವೆಡೆ ಸಂಭವಿಸಿದ ಮುಂಗಾರು ಮಳೆಯ ಅನಾಹುತಗಳು, ರುದ್ರ ನರ್ತನಗಳು ಮತ್ತು ಜನಸಾಮಾನ್ಯರಿಗೆ ಆದಂತಹ ತೊಂದರೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದರು.
ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಸಾರ ಆಗುವ ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಇಂದು ತನ್ನ 103ನೇ ಸಂಚಿಕೆಯನ್ನು ಪೂರೈಸಿತು. ಈ ವೇಳೆ ಮಳೆಯಿಂದಾದ ಅನಾಹುತ ಸೇರಿ ಹಲವು ವಿಚಾರಗಳನ್ನು ದೇಶದ ಜನರೊಂದಿಗೆ ಹಂಚಿಕೊಂಡಿದ್ದಾರೆ.
ಮುಂಗಾರು ಕುರಿತು ಪ್ರಸ್ತಾಪಿಸಿದ ಪ್ರಧಾನಿ ಅವರು, ಕಳೆದ ಹಲವು ದಿನಗಳಿಂದ ನೈಸರ್ಗಿಕ ವಿಕೋಪಗಳ ಕಾರಣದಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಸ್ಥಳೀಯ ಜನರು, ಎನ್ಡಿಆರ್ಎಫ್ ಯೋಧರು ಮತ್ತು ಸ್ಥಳೀಯ ಆಡಳಿತ ಇಂತಹ ವಿಪತ್ತುಗಳನ್ನು ಎದುರಿಸಲು ಹಗಲಿರುಳು ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.
ಆರಂಭದಲ್ಲಿ ಪ್ರಧಾನಿ ಮೋದಿ ಅವರು, ‘ನನ್ನ ಪ್ರೀತಿಯ ದೇವಶವಾಸಿಗಳೇ, ಪ್ರಸ್ತುತ ಸಾವನ್ ಪವಿತ್ರ ತಿಂಗಳು ನಡೆಯುತ್ತಿದೆ’. ‘ಮಹಾದೇವನನ್ನು ಪೂಜಿಸುವ ಜೊತೆಗೆ, ಸಾವನ್ ಹಸಿರು ಮತ್ತು ಸಂತೋಷದೊಂದಿಗೆ ಸಂಬಂಧ ಹೊಂದಿದೆ’ ಎಂದಿದ್ದಾರೆ.
ಉತ್ತರ ಪ್ರದೇಶದಿಂದ ಒಂದು ಪ್ರೋತ್ಸಾಹದಾಯಕ ಸುದ್ದಿ ಬಂದಿದೆ. ಕೆಲವು ದಿನಗಳ ಹಿಂದೆ ಯುಪಿಯಲ್ಲಿ ಒಂದೇ ದಿನ 30 ಕೋಟಿ ಸಸಿಗಳನ್ನು ನೆಟ್ಟ ದಾಖಲೆಯನ್ನು ಮಾಡಲಾಗಿದೆ. ಆಜಾದಿ ಕಾ ಅಮೃತ್ ಮಹೋತತ್ವದ ಸಮಯದಲ್ಲಿ ನಿರ್ಮಿಸಲಾದ 60 ಸಾವಿರ್ಕಕೂ ಅಧಿಕ ಅಮೃತ ಸರೋವರಗಳು ಮಳೆಯಿಂದ ತುಂಬಿ ತಮ್ಮ ಹೊಳಪನ್ನು ಹೆಚ್ಚಿಸಿಕೊಂಡಿವೆ. 50 ಸಾವಿರಕ್ಕೂ ಹೆಚ್ಚು ಅಮೃತ ಸರೋವರುಗಳನ್ನು ನಿರ್ಮಿಸುವ ಕೆಲಸವೂ ನಡೆಯುತ್ತಿದೆ. ನಮ್ಮ ಜನರಿಗೆ ನೀರನ್ನು ಸಂರಕ್ಷಿಸಲು ದೇಶದಲ್ಲಿ ಹೊಸ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
‘ನನ್ನ ಭೂಮಿ- ನನ್ನ ದೇಶ’ ಅಭಿಯಾನ:
ಹುತಾತ್ಮ ವೀರಯೋಧರು ಮತ್ತು ವೀರ ವನಿತೆಯರನ್ನು ಗೌರವಿಸಲು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ’ನನ್ನ ಭೂಮಿ- ನನ್ನ ದೇಶ’ ಅಭಿಯಾನವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹುತಾತ್ಮರ ಸ್ಮರಣೆಗಾಗಿ ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಗ್ರಾಮ ಪಂಚಾಯಿತಿಗಳಲ್ಲೂ ವಿಶೇಷ ಶಾಸನಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.
ಕಳೆದ ವರ್ಷ ಸ್ವಾತಂತ್ರ್ಯ ದಿನದಂದು ಇಡೀ ರಾಷ್ಟ್ರ ’ಹರ್ ಘರ್ ತಿರಂಗಾ ಅಭಿಯಾನ’ಕ್ಕೆ ಒಗ್ಗೂಡಿತ್ತು ಎಂದು ಸ್ಮರಿಸಿದ ಪ್ರಧಾನಿ, ಈ ವರ್ಷವೂ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಬೇಕು. ಈ ಪ್ರಯತ್ನಗಳನ್ನು ಮಾಡುವ ಮೂಲಕ, ಜನರು ತಮ್ಮ ಕರ್ತವ್ಯಗಳನ್ನು ಮತ್ತು ಸ್ವಾತಂತ್ರ್ಯದ ಮೌಲ್ಯವನ್ನು ತಿಳಿಯಲಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗಗಳನ್ನು ಸ್ಮರಿಸಲಿದ್ದಾರೆ ಎಂದು ಹೇಳಿದರು.
ಕಳೆದ ವರ್ಷದಂತೆ ಈ ವರ್ಷವೂ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಬೇಕು. ಈ ಸಂಪ್ರದಾಯ ಮುಂದೆಯೂ ಮುಂದುವರಿಯಲಿದೆ ಎಂದರು.
‘ಆಜಾದಿ ಕಾ ಅಮೃತ್ ಮಹೋತ್ಸವ’ ಸಂದರ್ಭದಲ್ಲಿ60 ಸಾವಿರಕ್ಕೂ ಹೆಚ್ಚು ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ. ಸದ್ಯ, 50 ಸಾವಿರಕ್ಕೂ ಹೆಚ್ಚು ಅಮೃತ ಸರೋವರಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ‘ಜಲ ಸಂರಕ್ಷಣೆ’ಗಾಗಿ ಜನರು ವಿನೂತನ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಹಜ್ ಯಾತ್ರೆ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಪ್ರಧಾನಿ
ಹಜ ಯಾತ್ರೆಗೆ ಸಂಬಂಧಿಸಿದಂತೆ, ಈ ಬಾರಿಯ ಮನ್ ಕಿ ಬಾತ್ನಲ್ಲಿ ನನಗೂ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಗಳು ಬಂದಿವೆ, ಅದು ಮನಸ್ಸಿಗೆ ಸಾಕಷ್ಟು ತೃಪ್ತಿಯನ್ನು ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇತ್ತೀಚೆಗೆ ಹಜ್ ಯಾತ್ರೆ ಮುಗಿಸಿ ಬಂದ ಮುಸ್ಲಿಂ ಮಹಿಳೆಯರು ಈ ಪತ್ರಗಳನ್ನು ಬರೆದಿದ್ದಾರೆ. ಅವರ ಈ ಪಯಣ ಹಲವು ರೀತಿಯಲ್ಲಿ ವಿಶೇಷವಾಗಿದೆ. ಹಿಂದಿನ ಮುಸ್ಲಿಂ ಮಹಿಳೆಯರಿಗೆ ಮೆಹ್ರಮ್ ಇಲ್ಲದೆ ಹಜ್ ಮಾಡಲು ಅವಕಾಶವಿರಲಿಲ್ಲ. ನಾನು ಸೌದಿ ಅರೇಬಿಯಾ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಹ ವ್ಯಕ್ತಪಡಿಸುತ್ತೇನೆ. ಮೆಹ್ರಮ್ ಇಲ್ಲದೆ ಹಜ್ಗೆ ಹೋಗುವ ಮಹಿಳೆಯರಿಗೆ ವಿಶೇಷವಾಗಿ ಮಹಿಳಾ ಸಂಯೋಜಕರನ್ನು ನೇಮಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಹಜ್ ನೀತಿಯಲ್ಲಿ ಮಾಡಲಾದ ಬದಲಾವಣೆಗಳನ್ನು ಹೆಚ್ಚು ಪ್ರಶಂಸಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ನಮ್ಮ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರು ಈ ಬಗ್ಗೆ ನನಗೆ ಸಾಕಷ್ಟು ಪತ್ರಗಳನ್ನು ಬರೆದಿದ್ದಾರೆ. ಈಗ ಹೆಚ್ಚು ಹೆಚ್ಚು ಜನರಿಗೆ ಹಜ್ಗೆ ಹೋಗಲು ಅವಕಾಶ ಸಿಗುತ್ತಿದೆ ಎಂದರು.