ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.31: ಕಳೆದ ಮೂರು ತಿಂಗಳಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ ಬಿಡುಗಡೆಯಾದ ಹಣವೆಷ್ಟು ಮತ್ತು ಖರ್ಚಾದ ಹಣವೆಷ್ಟು ಎಂಬ ವಿವರವೇ ಗೊತ್ತಿಲ್ಲದ ನೀವು ಶುದ್ದ ನಾಲಾಯಕ್ಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಅನುಸೂಚಿತ ಜಾತಿ, ಅನುಸೂಚಿನ ಬುಡಕಟ್ಟುಗಳ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು,ತಮಗೆ ಸಮರ್ಪಕ ಮಾಹಿತಿ ನೀಡದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಭಿವದ್ದಿಗೆ ಸಂಬಂಧಿಸಿದ ಕಾಯ್ದೆಯಡಿ ಒದಗಿಸಲಾದ ಹಣದ ಪೈಕಿ ಎಷ್ಟು ಹಣವನ್ನು ಕಳೆದ ಮೂರು ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ? ಮತ್ತು ಬಿಡುಗಡೆಯಾದ ಹಣದ ಪೈಕಿ ಎಷ್ಟು ಹಣವನ್ನು ಖರ್ಚು ಮಾಡಲಾಗಿದೆ? ಎಂದು ತಾವು ಕೇಳಿದ ಪ್ರಶ್ನೆಗೆ ಅಧಿಕಾರಿಗಳು ಸೂಕ್ತ ಉತ್ತರ ನೀಡದೆ ಹೋದಾಗ ಸಿದ್ಧರಾಮಯ್ಯ ಕೆಂಡಾಮಂಡಲಗೊಂಡರು.
ಪರಿಶಿಷ್ಟರ ಕಲ್ಯಾಣಕ್ಕಾಗಿ ಎಷ್ಟು ಹಣ ಬಿಡುಗಡೆಯಾಗಿದೆ? ಮತ್ತು ಇದರಲ್ಲಿ ಎಷ್ಟು ಹಣ ಖರ್ಚಾಗಿದೆ? ಎಂಬ ವಿವರ ನಿಮಗೇ ಗೊತ್ತಿಲ್ಲದೆ ಇದ್ದರೆ, ನೊಂದ ಸಮುದಾಯಗಳ ಪರವಾರಿ ನೀವೇನು ಕೆಲಸ ಮಾಡುತ್ತೀರಿ? ಪ್ರತಿ ಮೂರು ತಿಂಗಳಿಗೊಮ್ಮೆ ರಾಜ್ಯ ಅಭಿವೃದ್ದಿ ಪರಿಷತ್ ಸಭೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕು. ಆದರೆ ಕಳೆದ ಜುಲೈ ತಿಂಗಳಲ್ಲಿ ನಡೆದ ನಂತರ ಅಭಿವೃದ್ದಿ ಪರಿಷತ್ ನ ಸಭೆಯೇ ನಡೆದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಂತದಲ್ಲಿ ಅಧಿಕಾರಿಗಳು ಸಮಜಾಯಿಷಿ ನೀಡಲು ಯತ್ನಿಸಿದರಾದರೂ, ಕೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪಕ್ಕದಲ್ಲಿಯೇ ಕುಳಿತಿದ್ದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಕಡೆ ತಿರುಗಿ, ಈ ಸಭೆಯನ್ನು ರದ್ದು ಮಾಡಿಬಿಡಿ. ಇಲಾಖೆಯ ಅಧಿಕಾರಿಗಳ ಬಳಿ ಸಮರ್ಪಕ ಮಾಹಿತಿಯೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಈ ರೀತಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ಜಾಡಿಸಿದಾಗ ಇಡೀ ಸಭೆ ಮೂಕ ವಿಸ್ಮಿತವಾಗಿತ್ತು.
ತದ ನಂತರ ಸಾವರಿಸಿಕೊಂಡ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಿದ್ದಲ್ಲದೆ ಮುಂದಿನ ಮೂರು ತಿಂಗಳ ನಂತರ ಅಭಿವೃದ್ಧಿ ಪರಿಷತ್ ಸಭೆ ಸೇರುವ ಕಾಲಕ್ಕೆ ನಿಮ್ಮ ಬಳಿ ಅನುಸೂಚಿತ ಜಾತಿ, ಪಂಗಡಗಳಿಗೆ ಮೀಸಲಿಟ್ಟ ಹಣದ ವಿವರ ಇರಬೇಕು ಮತ್ತು ಬಿಡುಗಡೆಯಾದ, ಖರ್ಚಾದ ಹಣದ ವಿವರ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈ ಹಣವನ್ನು ಬಳಕೆ ಮಾಡುವ ಸಂಬಂಧದ ಕ್ರಿಯಾ ಯೋಜನೆ ಇರಬೇಕು ಎಂದು ನುಡಿದರು.
ಅನುದಾನ ಹೆಚ್ಚಳ:ಮಹದೇವಪ್ಪ
ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಅವರು, ಕಾಯ್ದೆಯ ಪ್ರಕಾರ ಪರಿಶಿಷ್ಟರಿಗೆ ಮೀಸಲಾಗಿಡುವ ಹಣವನ್ನು ಬೇರೆ ಇಲಾಖೆಗಳ ಬಳಕೆಗೆ ಕೊಡುವುದನ್ನು ನಿರ್ಭಂಧಿಸಲಾಗಿದೆ ಎಂದರು.
ಈ ಸಂಬಂದ ಇದ್ದ 7ಡಿ ಕಾಯ್ದೆಯನ್ನು ರದ್ದುಗೊಳಿಸಲಾಗಿದ್ದು ಪರಿಶಿಷ್ಟರಿಗೆ ಮೀಸಲಾಗಿಡಲಾದ ಹಣ ಬೇರೆ ಉದ್ದೇಶಗಳಿಗೆ ಖರ್ಚು ಮಾಡಲು ಅವಕಾಶ ನೀಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಈ ಹಿಂದೆ ಪರಿಶಿಷ್ಟರಿಗೆ ಮೀಸಲಾದ ಹಣವನ್ನು ಬೇರೆ ಬೇರೆ ವಲಯಗಳಿಗೆ ಬಿಡುಗಡೆ ಮಾಡುವ ಕೆಲಸವಾಗುತ್ತಿತ್ತು. ಆದರೆ ಅಂತಹ ದುರ್ಬಳಕೆಯನ್ನು ಈಗ ತಡೆಯಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ಈ ಸಲ ಎಸ್.ಸಿ.ಎಸ್.ಪಿ-ಟಿ.ಎಸ್.ಪಿ ಯೋಜನೆಗೆ 4030 ಕೋಟಿ ರೂಗಳಷ್ಟು ಹೆಚ್ಚುವರಿ ಅನುದಾನ ನೀಡಲಾಗಿದೆ. ಇದೇ ರೀತಿ ಎಸ್.ಸಿ.ಎಸ್.ಪಿ ಯೋಜನೆಗೆ 24,333 ಕೋಟಿ ರೂಪಾಯಿ,ಟಿ.ಎಸ್.ಪಿ ಯೋಜನೆಗೆ 9961 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ ಎಂದರು.
ಕಾಯ್ದೆಯಡಿ ಪರಿಶಿಷ್ಟರಿಗೆ ಮೀಸಲಿಡಲಾದ ಹಣದ ಪೈಕಿ ಆರು ಸಾವಿರ ಕೋಟಿ ರೂಪಾಯಿಗಳನ್ನುಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ನೀಡಿದೆ ಎಂಬ ಬಿಜೆಪಿ ಆರೋಪವನ್ನು ತಳ್ಳಿ ಹಾಕಿದ ಮಹದೇವಪ್ಪ,ಇದು ಆಧಾರ ರಹಿತ ಆರೋಪ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿರುವವರಿಗಾಗಿ ಕಾಯ್ದೆಯಡಿ ಮೀಸಲಾದ ಹಣದ ಬಳಕೆಯಾಗಲಿದೆ.ಅದರ ಪ್ರಮಾಣ 11 ಸಾವಿರ ಕೋಟಿ ರೂಪಾಯಿಗಳಷ್ಟಿರಲಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಲ್ಲಿ ಪ್ರವೇಶ ನಿರಾಕರಿಸುವಂತಿಲ್ಲ.ಬೇಕಿದ್ದರೆ ಹೆಚ್ಚುವರಿ ಹಾಸ್ಟೆಲ್ ಗಳನ್ನು ಪ್ರಾರಂಭಿಸಿ ಎಂದು ಇಂದಿನ ಸಭೆಯಲ್ಲಿ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಹೇಳಿದರು.
ಎಸ್.ಸಿ.ಎಸ್ ಪಿ-ಟಿ.ಎಸ್.ಪಿ ಅನುದಾನದಲ್ಲಾಗಿರುವ ದುರ್ಬಳಕೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಿದ್ದೇವೆ ಎಂದ ಅವರು,ತನಿಖೆ ಈಗಾಗಲೇ ನಡೆಯುತ್ತಿದೆ ಮತ್ತು ಮತ್ತಷ್ಷು ದೂರುಗಳು ಬಂದರೆ ಅದರ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗುವುದು ಎಂದು ವಿವರಿಸಿದರು.