ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಜು 31 : ತಾಲ್ಲೂಕಿನ ಸಾವಕನಹಳ್ಳಿಗೆ ಹೊಂದಿಕೊಂಡಂತೆ ಹಾದು ಹೋಗಿರುವ ನೂತನ ರಾಷ್ಟ್ರೀಯ ಹೆದ್ದಾರಿ 207ಕ್ಕೆ ಸಂಪರ್ಕ ಕಲ್ಪಿಸಲು ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕು, ರಸ್ತೆ ಕಾಮಗಾರಿಯಿಂದ ಮುಚ್ಚಿ ಹೋಗಿರುವ ರಾಜಕಾಲುವೆಯನ್ನು ಅಭಿವೃದ್ಧಿ ಪಡಿಸಿ ಮಳೆ ನೀರು ಕೆರೆಗೆ ಸೇರುವಂತೆ ಮಾಡಬೇಕು ಎಂದು ಸಾವಕನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಎಸ್.ಪಿ.ಮುನಿರಾಜು ಆಗ್ರಹಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಥಳೀಯರಿಗೆ ಅನಾನೂಕೂಲವಾಗುವಂತೆ ಬೃಹತ್ ರಸ್ತೆಗಳನ್ನು ನಿರ್ಮಿಸಿದ್ದು, ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸದ ಪಕ್ಷದಲ್ಲಿ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಶನಿವಾರ ಹೊಸ ಹೆದ್ದಾರಿಯನ್ನು ವೀಕ್ಷಣೆ ಮಾಡಲು ಬಂದಿದ್ದ ಸಂಸದ ತೇಜಸ್ವಿ ಸೂರ್ಯರವರು ಪೋಟೋ ಶೂಟ್ಗಾಗಿ ಮಾತ್ರವೇ ಅಲ್ಲಿಗೆ ಬಂದಿದ್ದಾರೆ. ಅವರೊಂದಿಗೆ ದೊಡ್ಡಬಳ್ಳಾಪುರದ ಬಿಜೆಪಿ ಶಾಸಕ ಧೀರಜ್ ಮುನಿರಾಜು ಇದ್ದು, ರೈತರು ಸಮಸ್ಯೆ ಹೇಳಿಕೊಳ್ಳಲು ಹೋದಾಗ ತಡೆದಿರುವುದು ಅಕ್ಷಮ್ಯ’ ಎಂದು ಹರಿಹಾಯ್ದರು.
ಹೆದ್ದಾರಿ ಕಾಮಗಾರಿ ಪ್ರಾರಂಭವಾಗುವುದಕ್ಕೆ ಮುನ್ನ ಇದ್ದ ನೀಲಿನಕ್ಷೆಯಂತೆ ರಸ್ತೆ ನಿರ್ಮಾಣವಾಗಿಲ್ಲ, ಬಸ್ ನಿಲ್ದಾಣ, ಸರ್ವೀಸ್ ರಸ್ತೆಗಳು ವಾಸ್ತವದಲ್ಲಿ ಕಣ್ಮರೆಯಾಗಿದೆ. ಓಡಾಟಕ್ಕೆ ರೈತರ ಜಮೀನು ಕಬಳಿಕೆ ಮಾಡಿ, ಈಗ ಅವರ ಭೂಮಿಗೆ ಸಾಗಲು ದಾರಿಯಿಲ್ಲದಂತೆ ಮಾಡಿರುವುದು ಎಷ್ಟು ಸರಿಯಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯರನ್ನು ಪ್ರಶ್ನಿಸಿದರು.
ಈ ಮೊದಲು ಇದ್ದ ರಾಜಕಾಲುವೆಗಳು, ನೀರುಗಾಲುವೆಗಳನ್ನು ಹೆದ್ದಾರಿ ನಿರ್ಮಾಣದ ವೇಳೆಯಲ್ಲಿ ಮುಚ್ಚಿದ್ದು, ಇದರಿಂದಾಗಿ ಮಳೆ ಬಂದಾಗ ರೈತರ ಜಮೀನುಗಳಿಗೆ ನೀರು ನುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ನಿರ್ಮಾಣಕ್ಕೆ ಭೂಮಿ ಸ್ವಾಧೀನ ಮಾಡುವ ಸಂದರ್ಭದಲ್ಲಿ ಸಾವಕನಹಳ್ಳಿ ಗ್ರಾಮದ ಕೃಷಿ ಭೂಮಿಗೆ ಕಡಿಮೆ ಬೆಲೆ ನಿಗದಿ ಮಾಡಿ ಮೋಸ ಮಾಡಲಾಗಿದೆ ಎಂದು ದೂರಿದರು.
ಈಗಾಗಲೇ ಉಂಟಾಗಿರುವ ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಪತ್ರ ನೀಡಲಾಗಿದ್ದು, ತಕ್ಷಣವೇ ಸ್ಪಂದಿಸದಿದ್ದ ಪಕ್ಷದಲ್ಲಿ ಎಲ್ಲ ರೈತರು ಎತ್ತಿನ ಬಂಡಿ, ಟ್ರಾಕ್ಟರ್ ಸೇರಿದಂತೆ ಉಳುಮೆ ಮಾಡುವ ಪರಿಕರಗಳನ್ನು ಹೊಸ ಹೆದ್ದಾರಿಗೆ ಅಡ್ಡಲಾಗಿ ನಿಲ್ಲಿಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಇದೇ ವೇಳೆ ಗ್ರಾಮಪಂಚಯತಿ ಸದಸ್ಯ ರಾಜಶೇಖರ್, ಮಂಜುನಾಥ್, ಕಾರ್ತಿಕ್, ಮುನಿಯಪ್ಪ, ಗೋಪಿ, ಸುನೀಲ್, ಚಂದನ್ಗೌಡ, ಮುಂತಾದವರು ಇದ್ದರು.