ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.31: ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಬಗ್ಗೆ ಚರ್ಚೆ ನಡೆಸಲು ಸಚಿವರು, ಪಕ್ಷದ ಮುಖಂಡರಿಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ನೀಡಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಆ.02 ರಂದು ಆಹ್ವಾನಿತ ಮುಖಂಡರು ನವದೆಹಲಿಗೆ ತೆರಳಲಿದ್ದಾರೆ. ಆಡಳಿತಾರೂಢ ಪಕ್ಷದಲ್ಲಿ ಅಸಮಾಧಾನ ತಲೆದೋರಿರುವ ಲಕ್ಷಣಗಳು ಗೋಚರಿಸಿರುವ ಬೆನ್ನಲ್ಲೇ ನಡೆಯುತ್ತಿರುವ ಈ ಸಭೆ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿಲ್ಲ, ಕೆಲವು ಸಚಿವರು ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.
ಹೌದು, ನಮಗೆ ರಾಜಕೀಯ ಅಜೆಂಡಾ ಇದೆ. ಸಂಸತ್ ಚುನಾವಣೆಗೆ ನಾವು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕಿದೆ. ಲೋಕಸಭಾ ಚುನಾವಣೆ ಹಾಗೂ ಟಿಕೆಟ್ ಹಂಚಿಕೆ ಪ್ರಕ್ರಿಯೆಗಾಗಿ ನಾನು ನಾಯಕರಿಗೆ ಅವರ ಜವಾಬ್ದಾರಿಗಳನ್ನು ಹಂಚಿಕೆ ಮಾಡಬೇಕಿದೆ ಎಂದು ಡಿ.ಕೆ ಶಿವಕುಮಾರ್ ಹೈಕಮಾಂಡ್ ಬುಲಾವ್ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಂಸತ್ ಚುನಾವಣೆಗೆ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಬೇಕು? ಯಾವುದೇ ಸಚಿವರು ಅಥವಾ ಶಾಸಕರನ್ನು ಕಣಕ್ಕೆ ಇಳಿಸಬೇಕೇ? ಯಾರಿಗೆ ಜವಾಬ್ದಾರಿ ನೀಡಬೇಕು ಎಂಬ ಅಂಶಗಳ ಬಗ್ಗೆ ನಾವು ಮಾನದಂಡಗಳನ್ನು ನಿಗದಿಪಡಿಸಬೇಕಿದೆ ಆದ್ದರಿಂದ ಎಲ್ಲಾ ಹಿರಿಯ ನಾಯಕರ ಸಭೆಯನ್ನು ಹೈಕಮಾಂಡ್ ಕರೆದಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೆಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಇತರರು ದೆಹಲಿ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಪಕ್ಷದಲ್ಲಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ ಶಿವಕುಮಾರ್, ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಮತ್ತು ಕೆಲವು ಶಾಸಕರು ಸಿಎಲ್ಪಿ ಸಭೆಗೆ ಮನವಿ ಮಾಡಿದ್ದಾರೆ, ಅದರಂತೆ ಕಳೆದ ವಾರ ನಡೆದಿತ್ತು ಎಂದಷ್ಟೇ ಹೇಳಿದ್ದಾರೆ.