ಸುದ್ದಿಮೂಲ ವಾರ್ತೆ
ಯಾದಗಿರಿ,ಆ.1:ವ್ಯಸನಮುಕ್ತ ಸಮಾಜಕ್ಕೆ ಶ್ರಮಿಸಿದ ಡಾ. ಮಹಾಂತ ಶಿವಯೋಗಿಯವರು ತೋರಿದ ದಾರಿಯಲ್ಲಿ ಪ್ರತಿಯೊಬ್ಬರೂ ಸಾಗಿದರೆ ಆರೋಗ್ಯಕ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ *ವ್ಯಸನ ಮುಕ್ತ ದಿನಾಚರಣೆ ಆಚರಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ದುಶ್ಚಟಗಳನ್ನು ಬಿಡುವುದರಿಂದ ದೈಹಿಕ ಆರೋಗ್ಯ ಸುಧಾರಣೆಯಾಗುತ್ತದೆ ಜೊತೆಗೆ ಆರ್ಥಿಕವಾಗಿ ಸದೃಡರಾಗಲೂ ಸಾಧ್ಯವಿದೆ. ದುಶ್ಚಟಗಳಿಗೆ ದಾಸರಾಗಿ ನಿತ್ಯ ಕಣ್ಣೀರಿಡುವ ಕುಟುಂಬಗಳಿಗೆ ಶಾಶ್ವತ ನೆಮ್ಮದಿ ಕಲ್ಪಿಸಿದ ಶ್ರೇಯಸ್ಸು ಮಹಾಂತ ಯೋಗಿಗಳಿಗೆ ಸಲ್ಲುತ್ತದೆ. ಹಾಗಾಗಿ ಇವರ ಜನ್ಮದಿನದ ಪ್ರಯುಕ್ತ ಸರಕಾರವು ವ್ಯಸನಮುಕ್ತ ದಿನಾಚರಣೆ ಆಚರಿಸುತ್ತಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ಶಿವಯೋಗಿಯವರು ಸಮಾಜದಲ್ಲಿ ಸಂಚಾರ ಮಾಡಿ ಲೋಕದ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಂಡು ಮಾನಸಿಕ ನೆಮ್ಮದಿ ನೀಡುವ ಆರೋಗ್ಯಕರ ಚಿಂತನೆಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವ ಮೂಲಕ ಉತ್ತಮ ಜೀವನ ನಡೆಸಲು ಅನೇಕರಿಗೆ ಪ್ರೇರಣೆಯಾಗಿದ್ದಾರೆ ಎಂದರು.
ಯುವ ಪೀಳಿಗೆಯು ತಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯಯುತ ಜೀವನಕ್ಕೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ನುಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಹಾಗೂ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.