ಸುದ್ದಿಮೂಲವಾರ್ತೆ
ಕೊಪ್ಪಳ,ಆ.1: ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎಂಬಂತಾಗಿದೆ. ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ ರೈತರ ಸ್ಥಿತಿ. ವಿಭವಾದರೂ ಜಲಾಶಯದಲ್ಲಿ ಶೇ 75 ರಷ್ಟು ನೀರು ತುಂಬಿದೆ. ಈ ನೀರು ಮುಂಗಾರು ಹಂಗಾಮಿಗೆ ಸಾಕಾಗಯತ್ತದೆ. ಆದರೆ ಈಗ ನಾಲೆಗಳಿಗೆ ನೀರು ನಾಲೆಯ ಎಸ್ಕೇಪ್ ಗೇಟ್ ರಿಪೇರಿ ಕಾಮಗಾರಿ ವಿಳಂಭವಾಗಿ ನಾಲೆಗೆ ನೀರು ಬಿಡುವದಕ್ಕೆ ಆಗುತ್ತಿಲ್ಲ. ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ ಬಳಿಯಲ್ಲಿರುವ ಎಸ್ಕೇಪ್ ಗೇಟ್ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ತರಾತುರಿಯಲ್ಲಿ ಗೇಟ್ ಅಳವಡಿಸುವ ಕಾರ್ಯ ನಡೆಯುತ್ತಿದೆ.
ಕರ್ನಾಟಕ, ಆಂಧ್ರ ಹಾಗು ತೆಲಂಗಾಣ ರಾಜ್ಯದ 11 ಲಕ್ಷ ಎಕರೆ ಭೂಮಿಗೆ ನೀರುಣಿಸುವ ತುಂಗಭದ್ರಾ ಜಲಾಶಯವು ಈ ಬಾರಿ ನೀರು ಹರಿದು ಬರುವುದೇ ತಡವಾಗಿದೆ. ಆಗಷ್ಟ ಒಂದರಂದು ಜಲಾಶಯದಲ್ಲಿ 78 ಟಿಎಂಸಿ ನೀರು ಸಂಗ್ರಹವಾಗಿದೆ. ಒಟ್ಟು 105.766 ಟಿಎಂಸಿ ಸಾಮಾರ್ಥ್ಯದ ಜಲಾಶಯ ಭರ್ತಿಯಾಗಲು ಇನ್ನೂ ಸಾಕಷ್ಟು ನೀರು ಬರಬೇಕು. ಈ ಮಧ್ಯೆ ಜಲಾಶಯದಲ್ಲಿರುವ ಈಗಿನ ನೀರು ಮುಂಗಾರು ಹಂಗಾಮಿಗೆ ಸಾಕಾಗುತ್ತದೆ. ಈಗಾಗಲೇ ವಿಳಂಭವಾಗಿದೆ. ಬೇಗ ನಾಲೆಗಳಿಗೆ ನೀರು ಬಿಡಿ ಎಂದು ರೈತರು ಆಗ್ರಹಿಸಿದ್ದಾರೆ. ಆದರೆ ನಾಲೆಗೆ ನೀರು ಬಿಡಲು ಈಗ ಬಂಡಿ ಹರ್ಲಾಪುರ ಬಳಿಯಲ್ಲಿ ನಾಲೆಯ ಮೈಲ್ 10 ರಲ್ಲಿಯ ಎಸ್ಕೇಪ್ ಗೇಟ್ ರಿಪೇರಿ ಕಾಮಗಾರಿ ಪೂರ್ಣಗೊಳ್ಳದೆ ಕಾರಣವಾಗಿದೆ.
ನಾಲೆ ನಿರ್ಮಾಣವಾದ ನಂತರ ಇದು ಎರಡನೆಯ ಬಾರಿ ಎಸ್ಕೇಪ್ ಗೇಟ್ ತೆಗೆದು ಹಾಕಲಾಗುತ್ತಿದೆ. ಕಳೆದ ಮೂವತ್ತು ವರ್ಷಗಳ ಹಿಂದೆ ಅಳವಡಿಸಿದ್ದ ಮೂರು ಎಸ್ಕೇಪ್ ಗೇಟುಗಳು ತುಕ್ಕು ಹಿಡಿದಿವೆ. ಗೇಟ್ ಗಳ ಬದಲಾಯಿಸುವುದು ಅನಿವಾರ್ಯವಾಗಿರುವದರಿಂದ ಈಗ ನಾಲೆಯ ಗೇಟ್ ಗಳ ಬದಲಾವಣೆ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಆರಂಭಿಸಿದ್ದೆ ವಿಳಂಭವಾಗಿದೆ. ಜು 4 ರಂದು ಗೇಟ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು. ನಾಲೆಗೆ ನೀರು ಬಿಡುವ ಸಮಯದಲ್ಲಿ ಕಾಮಗಾರಿ ನಡೆಸಿದ್ದರಿಂದ ನಾಲೆಗೆ ನೀರು ಬಿಡಲಾಗುತ್ತಿಲ್ಲ.
40 ಲಕ್ಷ ರೂಪಾಯಿಯಲ್ಲಿ ಗೇಟ್ ಗಳ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಎಪ್ರಿಲ್ 10 ರಂದು ನಾಲೆಗಳಿಗೆ ನೀರು ನಿಲ್ಲಿಸಲಾಗಿತ್ತು. ಆಗಲೇ ರಿಪೇರಿ ಕಾಮಗಾರಿ ಮಾಡಬಹುದಾಗಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಟೆಂಡರ್ ಕರೆಯುವುದು ತಡವಾಗಿದೆ. ಈಗ ಕಾಮಗಾರಿ ನಡೆಯುತ್ತಿರುವದರಿಂದ ಮುಗಿಯಲು ವಿಳಂಭವಾಗಿದೆ. ಈಗ ಇನ್ನೂ 3-4 ದಿನವಾದರೂ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ. ಇನ್ನೂ ನಾಲ್ಕೈದು ದಿನ ಬಿಟ್ಟು ನಾಲೆಗೆ ನೀರು ಬಿಟ್ಟರೆ ರೈತರಿಗೆ ನಷ್ಟವಾಗಲಿದೆ.
ಈಗಾಗಲೇ ಭತ್ತದ ನಾಟಿಗಾಗಿ ಸಸಿಗಳನ್ನು ಹಾಕಿದ್ದಾರೆ. ಈ ವಾರದಲ್ಲಿ ಭತ್ತ ನಾಟಿ ಮಾಡಿದರೆ ಫಸಲು ಬರುವ ಸಂದರ್ಭದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ರೋಗ ಹೆಚ್ಚಾಗುತ್ತದೆ. ಅಲ್ಲದೆ ಇಳುವರಿ ಕಡಿಮೆಯಾಗುತ್ತಿದೆ. ಬೇಗನೇ ರಿಪೇರಿ ಕಾಮಗಾರಿ ಮುಗಿಸಬೇಕಿತ್ತು. ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ.